ನಬಾರ್ಡ್; ೬೯೬೦.೭೩ ಕೋಟಿ ರೂ. ಸಾಮರ್ಥ್ಯದ ಸಾಲ ಯೋಜನೆ ಬಿಡುಗಡೆ

15adarshkdga3
Published on

ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು(ನಬಾರ್ಡ್) ವತಿಯಿಂದ ೨೦೨೩-೨೪ನೇ ಸಾಲಿಗೆ ೬೯೬೦.೭೩ ಕೋಟಿ ರೂ. ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರು ಬಿಡುಗಡೆ ಮಾಡಿದರು.


ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ, ಜತೆಗೆ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಸಭೆ ನಡೆಸಿ ಮಾತನಾಡಿದರು.


ಕೃಷಿಗೆ ೪೫೬೧.೮೨ ಕೋಟಿ ರೂ., ಕೃಷಿ ಸಂಬಂಧಿಸಿದ ಮೂಲ ಸೌಲಭ್ಯಕ್ಕೆ ೧೭೭.೧೧ ಕೋಟಿ ರೂ., ಇತರೆ ಚಟುವಟಿಕೆಗೆ ೨೦೪.೪೫ ಕೋಟಿ ರೂ., ಮಧ್ಯಮ ಸಣ್ಣ ಕೈಗಾರಿಕಾ ಬೆಳವಣಿಗೆಗೆ ೭೭೩.೫೦ ಕೋಟಿ ರೂ., ಹೀಗೆ ಒಟ್ಟು ೬೯೬೦.೭೩ ಕೋಟಿ ರೂ. ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.


ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ವಿ.ರಮೇಶ್ ಬಾಬು ಮಾತನಾಡಿ, ಮುಂದಿನ(೨೦೨೩-೨೪) ಸಾಲಿಗೆ ಆದ್ಯತಾ ಕ್ಷೇತ್ರಗಳಾದ ಕೃಷಿ, ಸಣ್ಣ ಉದ್ಯಮ, ಶಿಕ್ಷಣ, ವಸತಿ ಮತ್ತಿತರ ಮೂಲ ಸೌಲಭ್ಯ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ನೀಡಲಾಗಿದೆ. ಇವುಗಳನ್ನು ಅರ್ಹರಿಗೆ ತಲುಪಿಸಲಾಗುತ್ತದೆ. ಕೃಷಿ, ಪಶುಪಾಲನೆ, ಮೀನುಗಾರಿಕೆ, ತೋಟಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಉದ್ಯಮಕ್ಕೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಮಾರುಕಟ್ಟೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.


ಪ್ರಧಾನಮಂತ್ರಿ ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಆತ್ಮನಿರ್ಭರ ಭಾರತ ಯೋಜನೆಯನ್ನು ಅನು?್ಠಾನಗೊಳಿಸಲಾಗುತ್ತದೆ. ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.


ಸಭೆಯಲ್ಲಿ ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಸ್.ಅನಂತ್, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ಶಿವಕುಮಾರ್, ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳ ಮುಖ್ಯಸ್ಥರು, ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net