ಆದ್ಯತಾ ವಲಯಕ್ಕೆ 11,057 ಕೋಟಿ ರೂ. ಸಾಲ ಗುರಿ ನಿಗದಿ

udp-27-Bank
Published on

ಉಡುಪಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ ವತಿಯಿಂದ 2024-25ನೇ ಸಾಲಿಗೆ ಜಿಲ್ಲೆಯಲ್ಲಿ 11,057.6 ಕೋಟಿ ರೂ. ಆದ್ಯತಾ ವಲಯಕ್ಕೆ ಸಾಲ ಯೋಜನೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಬಾರ್ಡ್ "ಪೊಟೆನ್ಶಿಯಲ್​ ಲಿಂಕ್ಡ್​ ಕ್ರೆಡಿಟ್​ ಪ್ಲಾನ್​ 2024-25'ನೇ ಸಾಲಿನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಗ್ರಾಮೀಣ ಜನತೆಗೆ ಸಮೃದ್ಧ ಹಾಗೂ ಸುಸ್ಥಿರ ಜೀವನ ನಡೆಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನಬಾರ್ಡ್​ ಮುಂದಾಗಬೇಕು ಎಂದು ಸೂಚಿಸಿದರು.

ವಲಯವಾರು ಹಂಚಿಕೆ: ಜಿಲ್ಲೆಯ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆ ಉತ್ತೇಜಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ನೀಡಲಿರುವ 11057.6 ಕೋಟಿ ರೂ. ಸಾಲದಲ್ಲಿ ಶೇ. 48.30ರಷ್ಟು ಕೃಷಿ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಸೂಕ್ಷ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಶೇ.33.30, ವಸತಿ ಯೋಜನೆಗೆ ಶೇ.7.35, ಶಿಕ್ಷಣಕ್ಕೆ ಶೇ.1.25, ಆದ್ಯತಾ ವಲಯಕ್ಕೆ ಶೇ.5.75, ಸಾಮಾಜಿಕ ಅಭಿವೃದ್ಧಿಗೆ ಶೇ. 0.80, ರಫ್ತು ಸಾಲ ಶೇ. 2.75 ರಷ್ಟು ಹೀಗೆ ವಲಯವಾರು ಸಾಲದ ಪ್ರಮಾಣ ಅಂದಾಜು ಪಡಿಸಿದೆ ಎಂದರು.

ಜಿಪಂ ಸಿಇಒ ಪ್ರಸನ್ನ ಎಚ್​., ನಬಾರ್ಡ್​ನ ಅಧಿಕಾರಿ ಸಂಗೀತಾ ಕರ್ತಾ, ಕರ್ಣಾಟಕ ಬ್ಯಾಂಕ್​ನ ರೀಜನಲ್​ ಮ್ಯಾನೇಜರ್​ ರಾಜಗೋಪಾಲನ್​, ಎಸ್​ಬಿಐ ಅಸಿಸ್ಟೆಂಟ್​ ಜನರಲ್​ ಮ್ಯಾನೇಜರ್​ ಶೀಬಾ ಸೆಹೆಜಾನ್​, ಶೋಭಲತಾ, ರಾಜ್​ಗೋಪಾಲ್​, ಯೂನಿಯನ್​ ಬ್ಯಾಂಕ್​ನ ಡಿಆರ್​ಎಂ ಶಿವಕುಮಾರ್​, ಜಿಲ್ಲಾ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಪಿ.ಎಂ. ಪಿಂಜಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net