

ಮಡಿಕೇರಿ:
ನಾವು ಉಣ್ಣುವ ಅನ್ನದ ಹಿಂದಿರುವ ಕೆಲಸಗಳ ಪರಿಕಲ್ಪನೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಶಾಲಾ ಮಕ್ಕಳಿಗೆ ಬುಧವಾರ ಅಗೆ ಮತ್ತು ನಾಟಿ ನೆಡುವುದರ ತರಬೇತಿ ನೀಡಲಾಯಿತು. ಕಗ್ಗೋಡ್ಲುವಿನ ಮಂದ್ರೀರ ತೇಜಸ್ ನಾಣಯ್ಯ ಅವರ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿಯ ಲಿಟ್ಲ್ ಫ್ಲವರ್ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಮೊದಲ ಬಾರಿಗೆ ಕೆಸರಿನ ಗದ್ದೆಗೆ ಇಳಿದು ಖುಷಿಪಟ್ಟರು.
ಅಗೆ ತೆಗೆಯುವಾಗ ವಹಿಸಬೇಕಾದ ಎಚ್ಚರಿಕೆ, ನಾಟಿ ನೆಡುವಾಗ ಕಲಿಯಬೇಕಾದ ಕೃಷಿ ನಿಯಮಗಳ ಬಗ್ಗೆ ಈ ಸಂದರ್ಭ ಮಕ್ಕಳಿಗೆ ತಿಳಿಹೇಳಲಾಯಿತು. ಮಕ್ಕಳು ತಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ತಮ್ಮ ತಟ್ಟೆಯ ಅನ್ನದ ಹಿಂದಿರುವ ಕೃಷಿ ಕತೆಯ ಅನುಭವ ಹೊಂದಿದರು.
ತೇಜಸ್ ಅವರ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಮಾಡಿಸಲಾಯಿತು. ಮೀನು ಮತ್ತು ಬಾತುಕೋಳಿಗಳಿಗೆ ಸ್ವತಃ ಆಹಾರ ನೀಡುವುದರೊಂದಿಗೆ ಅವುಗಳ ಜೀವನಕ್ರಮ ಅರಿತುಕೊಂಡರು. ಕಾರ್ಯಕ್ರಮದಲ್ಲಿ ಊರಿನ ದಾನಿಗಳಾದ ಬಳಪದ ರೋಷನ್ ಮಂದಣ್ಣ, ಕೊಡಂದಿರ ಪೊನ್ನಣ್ಣ, ತುಮ್ತಜಿರ ದಯಾನಂದ್, ಕುಂಜಿಲನ ಮೋಹನ್,ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರು ಮತ್ತು ಪದಾದಿಕಾರಿಗಳು, ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರು ಮಕ್ಕಳು ಇದ್ದರು.