ನಾ.ಡಿಸೋಜರ ಲೇಖನಗಳು ಸಮಾಜಮುಖಿಯಾಗಿವೆ: ಕೆ.ಮಿಲನ ಭರತ್

naa disoza
Published on

ಮಡಿಕೇರಿ: ಮಲೆನಾಡಿನ ಹಸಿರ ಒಡಲಲ್ಲಿ ಬೆರೆತು, ಪರಿಸರ ಪ್ರಜ್ಞೆಯ ಲೇಖನಗಳ ಸರಮಾಲೆಯ ಮೂಲಕ ಓರ್ವ ಪರಿಸರ ಪ್ರೇಮಿಯಾಗಿ ಬೆಳೆದ ಹಿರಿಯ ಸಾಹಿತಿ ನಾ.ಡಿಸೋಜ ಅವರ ಎಲ್ಲಾ ಲೇಖನಗಳು ಸಮಾಜಮುಖಿಯಾಗಿವೆ ಎಂದು ಸಾಹಿತಿ, ಕಲಾವಿದೆ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಮಿಲನ ಭರತ್ ಹೇಳಿದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ಸಹಕಾರಿ ಡಿಪ್ಲೋಮ ತರಬೇತಿ ಕೇಂದ್ರದಲ್ಲಿ ನಡೆದ ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ, ಕಥಾ ಸ್ಪರ್ಧೆ ಮತ್ತು ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಮಲೆನಾಡಿನ ಹಸಿರ ಪರಿಸರವನ್ನೆ ಕೇಂದ್ರವಾಗಿಟ್ಟುಕೊಂಡು ಅವರು ಬರೆದ ಕಾದಂಬರಿಗಳು ಸದ್ದಿಲ್ಲದೇ ಜಾಗೃತಿಯ ಬೆಳೆ ಬೆಳೆಯುತ್ತಾ ಕ್ರಾಂತಿಯ ಹೊಳೆ ಹರಿಸುವಂತೆ ಮಾಡಿದೆ. ಕುವೆಂಪು, ತೇಜಸ್ವಿ ಹೊರತುಪಡಿಸಿದಂತೆ ಮಲೆನಾಡಿನ ಪರಿಸರದೊಂದಿಗೆ ಇಷ್ಟೊಂದು ಕಾಳಜಿ ಇಟ್ಟುಕೊಂಡು ಕೃತಿಗಳನ್ನು ರಚಿಸಿದವರು ನಾ.ಡಿಸೋಜರವರು ಮಾತ್ರ ಎಂದು ಮಿಲನ ಭರತ್ ಹೇಳಿದರು.


ಸಾಹಿತಿಗಳು ರಚಿಸಿರುವ ಕಥೆ, ಕಾದಂಬರಿ ಇನ್ನಿತರ ಸಾಹಿತ್ಯಿಕ ಪುಸ್ತಕಗಳನ್ನು ವಿದ್ಯಾರ್ಥಿಗಳು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯ ಪರ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಅದರಲ್ಲಿ ಭಾಗವಹಿಸಬೇಕು. ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಬೆಳೆಸಿಕೊಂಡು ಉತ್ತಮ ರಂಗಭೂಮಿ ಕಲಾವಿದರಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕು. ನಾವಿರುವ ಸ್ಥಳದಲ್ಲಿಯೇ ನಮ್ಮ ಪ್ರಕೃತಿ, ಪರಿಸರ, ಜನಜೀವನ, ಬದುಕು ಗ್ರಾಮೀಣ ಜಾನಪದ ಕಲೆಗಳ ಕುರಿತಂತೆ ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.


ನಾ.ಡಿಸೋಜರವರ ಹೆಸರಿನಲ್ಲಿ ಪ್ರತಿ ವರ್ಷ ನಡೆಯುವ ದತ್ತಿ ಕಾರ್ಯಕ್ರಮದಲ್ಲಿ ಏರ್ಪಡಿಸುವ ಕಥಾ ಸ್ಪರ್ಧೆ, ನಾಟಕ ಸ್ಪರ್ಧೆ, ಪರಿಸರ ಪ್ರಜ್ಞೆ ಮತ್ತು ಮಕ್ಕಳ ಸಾಹಿತ್ಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಾವಂತರಾಗಿ ಬೆಳೆಯಬೇಕೆಂದರು.


ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್‌ರವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ನಾ.ಡಿಸೋಜ ಎಂದರೆ, ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿಯಷ್ಟೆ ಅಲ್ಲ. ಅಕ್ಷರಗಳಲ್ಲಿ ಸಾಹಿತ್ಯವನ್ನು ಮಾತ್ರ ನಿರ್ಮಿಸಿದವರಷ್ಟೆ ಅಲ್ಲ, ಲೇಖನಿಯಿಂದ ಬರಿ ಪುಸ್ತಕಗಳ ಶಿಖರವನ್ನು ಕಟ್ಟಿದವರಲ್ಲ. ಬದಲಾಗಿ ಅವರು ಅತ್ಯಂತ ಪ್ರಕರವಾದ ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವ ಧರ್ಮ ಸಮಭಾವದ ಪ್ರತಿಪಾದಕ. ವಿಶ್ವ ಮಾನವತ್ವ ಮೋಳೈಸಿಕೊಂಡ ದಾರ್ಶನಿಕ ಎಂದರು.


ಸಂಸ್ಥೆಯ ಪ್ರಾಚಾರ್ಯ ಡಾ.ಆರ್.ಎಸ್.ರೇಣುಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಟಕ ಸ್ಪರ್ಧೆ ಮತ್ತು ಕಥಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕ.ಸಾ.ಪ.ದ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಪತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಗೌ.ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಗೌರವ ಕಾರ್ಯದರ್ಶಿ ರೇವತಿ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net