

ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಯೋಗಾಪುರ ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ವತಿಯಿಂದ ನಗರದ ಹಳೇ ಬಸ್ ನಿಲ್ದಾಣ ಬಳಿಯ ಸುಜಾತಾ ಥೇಟರ್ ಪಕ್ಕದಲ್ಲಿ ನಿರ್ಮಿಸಿರುವ ರಂಗಮಂದಿರದಲ್ಲಿ ಆಗಸ್ಟ್ 1ರಿಂದ "ನಾ ಡ್ರೈವರಾ ಅಕಿ ನನ್ನ ಲವರಾ' ಎಂಬ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಮಾಲೀಕ ಪಾಪು ಕಲ್ಲೂರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯ ಮಧ್ಯಾಹ್ನ 3 ಹಾಗೂ ಸಂಜೆ 6.15ಕ್ಕೆ ಎರಡು ಪ್ರದರ್ಶನ ನಡೆಯಲಿವೆ. ಸಂರ್ಪೂಣ ಕುಟುಂಬದವರು ಕುಳಿತು ನೋಡಬಹುದಾದ ಉತ್ತಮ ಸಂದೇಶ ಇರುವ ನಾಟಕ ಇದಾಗಿದೆ. ಯಾವುದೇ ಅಶ್ಲೀಲ ಸಂಭಾಷಣೆ, ನೃತ್ಯ ಇರುವುದಿಲ್ಲ. ನಾಟಕ ಪ್ರೇಮಿಗಳು ಪರಿವಾರದೊಂದಿಗೆ ಆನಂದಿಸಬಹುದು ಎಂದರು.
ದಿ. ಕೃಷ್ಣಮೂರ್ತಿ ಶಾಸ್ತ್ರಿ ಶಲವಡಿ ವಿರಚಿತ ನಾಟಕ ಇದಾಗಿದ್ದು, ಕಾಮಿಡಿ ಕಿಲಾಡಿಗಳು ಸೀಸನ್-4 ರನ್ನರ್ ಅಪ್ ಜೂನಿಯರ್ ಉಮಾಶ್ರೀ ಖ್ಯಾತಿಯ ಶುಭಲಕ್ಷ್ಮಿ ಯಲ್ಲಾಪುರ ನಾಟಕದಲ್ಲಿ ಮುಖ್ಯ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕೆಂದು ಮನವಿ ಮಾಡಿದರು.
ಈ ಮೊದಲು ಗಂಡನಿಗೆ ತಕ್ಕ ಹೆಂಡತಿ ನಾಟಕವನ್ನು ಯಶಸ್ವಿಯಾಗಿ 75 ಪ್ರಯೋಗಗಳನ್ನು ಇಲ್ಲಿ ಮಾಡಲಾಗಿದೆ. ಮಳೆ ಇರುವ ಕಾರಣ ಪ್ರೇಕ್ಷಕರ ಕೊರತೆಯಾಗಿದ್ದು, ನಾಟಕವನ್ನು ಬದಲಿಸಿ ಹೊಸ ನಾಟಕ ಪ್ರಾರಂಭಿಸಲಾಗಿದೆ. ಇನ್ನೂ ಎಂಟ್ಹತ್ತು ನಾಟಕಗಳು ಸಂದ ಬಳಿ ಇವೆ. ಒಂದೊಂದಾಗಿ ಪ್ರದರ್ಶನ ಕಾಣಲಿವೆ ಎಂದರು.
ಕಲಾವಿದರಾದ ಅರುಣ ಮುಧೋಳ, ಮೇಘರಾಜ, ಸಂಕೇತ ಮಂಗಳೂರು, ಚಂದ್ರು, ರಿಯಾಜ ಕರ್ಜಗಿ ಗೋಷ್ಠಿಯಲ್ಲಿದ್ದರು.