

ಮೈಸೂರು: ಕಾಂಗ್ರೆಸ್‌ಗೆ ಗತಿ ಇಲ್ಲದೆ ನಾಲ್ಕು ಚುನಾವಣೆಯಲ್ಲಿ ಸೋತ ಲೂಸ್‌ಟಾಕ್ ಲಕ್ಷ್ಮಣ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕುಟುಕಿದರು.
ಸಂಸ್ಕಾರ ಇಲ್ಲದ ಯಾರನ್ನೋ ಕರೆದುಕೊಂಡು ಬಂದು ಒಕ್ಕಲಿಗ ಎಂದರೆ ಜನ ಒಪ್ಪಿಕೊಳ್ಳುತ್ತಾರೆಯೇ? ಕಾಂಗ್ರೆಸ್‌ನವರೇ ಲೂಸ್ ಟಾಕ್ ಲಕ್ಷ್ಮ್ಮಣ್ ಎಂದು ಬಿರುದು ಕೊಟ್ಟಿದ್ದಾರೆ. ನಿಮಗೆ ಗತಿ ಇಲ್ಲದೆ ನಾಲ್ಕು ಬಾರಿ ಸೋತವರನ್ನು ಅಭ್ಯರ್ಥಿ ಮಾಡಿದ್ದೀರಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕಾಂಗ್ರೆಸ್‌ಗೆ ಸಾಧನೆ ಹೇಳಿಕೊಳ್ಳಲು ಆಗುತ್ತಿಲ್ಲ. ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದು ಸಾಧನೆಯಲ್ಲ. ಮುದ್ರಾಂಕ, ಅಬಕಾರಿ ಸುಂಕ, ವಾಹನ ನೋಂದಣಿ ಶುಲ್ಕ, ವಿದ್ಯುತ್ ಶುಲ್ಕ ಏರಿಕೆ ಮಾಡಿದ್ದೀರಿ. ಮಂತ್ರಿಗಳು ಬರಗೆಟ್ಟವರಂತೆ ಯಾವುದನ್ನೂ ಬಿಡದೆ ಎಲ್ಲದಕ್ಕೂ ಬಾಯಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇವತ್ತಿನ ಕಾಂಗ್ರೆಸ್ ಕಮ್ಯುನಲ್ ಆಗಿ ಬದಲಾಗಿದ್ದು, ದೇಶದಲ್ಲಿ ಕ್ರೆಡಿಬಲಿಟಿ ಕಳೆದುಕೊಂಡು ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಎಂಬ ಕೂಗು ದೇಶದೆಲ್ಲೆಡೆ ಅನುರಣಿಸುತ್ತಿದೆ. ತಮಿಳುನಾಡಿನಲ್ಲೂ ಎರಡಂಕಿ ದಾಟಲಿದ್ದು, ಪರ್ಯಾಯ ರಾಜಕೀಯ ಶಕ್ತಿಯಾಗಿ ಬಿಜೆಪಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.