ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆಯಾಗಿರುವುದು ಜನನಿಭಿಡ ಪ್ರದೇಶದಲ್ಲಿ. ಹೀಗಿದ್ದರೂ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವತಿರ್ಸುತ್ತಿದೆ. ನೇಹಾ ಹಾಗೂ ಅಂಜಲಿ ಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯದಲ್ಲಿ ಅಸಮರ್ಥ ಸರ್ಕಾರ ಇರುವುದರಿಂದಾಗಿ ಇಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ನೇಹಾ ಕೊಲೆಯಾದ ಕೆಲವೇ ದಿನಗಳಲ್ಲಿ ಅದೇ ಮಾದರಿಯಲ್ಲಿ ಮತ್ತೊಂದು ಹತ್ಯೆಯಾಗಿದೆ ಎಂದರೆ ಸರ್ಕಾರ ಬದುಕಿದೆಯೇ ಎಂಬ ಅನುಮಾನ ಬರುತ್ತಿದೆ ಎಂದರು.
ಘಟನೆಗೆ ಪೊಲೀಸರು ಹೊಣೆಗಾರರು. ಯುವತಿಯ ಅಜ್ಜಿ ಠಾಣೆಗೆ ಹೋಗಿ ದೂರು ನೀಡಿದರೆ ಎ್ಐಆರ್ ಮಾಡಿಲ್ಲ. ಹಾಗಿದ್ದರೆ ಪೊಲೀಸ್ ಸ್ಟೇಶನ್ ಏಕೆ ಬೇಕು, ಮುಚ್ಚಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆಪಾತಕರ ರಾಜ್ಯ:
ರಣಹೇಡಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಕೊಲೆ ಪಾತಕರನ್ನು ರಕ್ಷಣೆ ಮಾಡುತ್ತಿದೆ. ಸಚಿವ ಸಂತೋಷ ಲಾಡ್, ಶಾಸಕ ಅಬ್ಬಯ್ಯ ಅವರಿಗೆ ಸಂತ್ರಸ್ತರ ಕಡೆ ಬರಲು ಮುಖ ಇದೆಯೇ? ಎಂದು ಪ್ರಶ್ನಿಸಿದ ರವಿಕುಮಾರ, ಸರ್ಕಾರ ಗಾಢ ನಿದ್ರೆಯಲ್ಲಿದೆ. ಹೀಗಾಗಿ ಕೊಲೆಗಳು ನಡೆಯುತ್ತಿವೆ. ಕರ್ನಾಟಕ ಕೆಮ್ ಸ್ಟೇಟ್ ಆಗುತ್ತಿದೆ ಎಂದರು.
ಅಂಜಲಿ ಮನೆಯವರಿಗೆ ಸರ್ಕಾರಿ ನೌಕರಿ ಕೊಡಬೇಕು. ಅವಳ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ಕೊಡಬೇಕು. ಸ್ವಂತ ಮನೆ ಕಟ್ಟಿಸಿಕೊಡಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.