ರೈತರ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿರುವ ಸರ್ಕಾರ

N-Ravikumar-MLA-Twitter-620x391
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸರ್ಕಾರ ಮೂರು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಆದರೆ, ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ರೈತರಿಗೆ ಕೊಟ್ಟಿಲ್ಲ. ಅಲ್ಲದೆ, ರೈತರಿಗೆ ಕೊಡಬೇಕಾಗಿದ್ದ ಸಹಾಯಧನದ ಬಾಕಿ ಹಣ ಬಿಡುಗಡೆ ಮಾಡಿಲ್ಲ ಎಂದು ವಿಧಾನ ಪರಿಷತ್‌ನ ಸದಸ್ಯ ಎನ್.ರವಿಕುಮಾರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಒಂದು ಲೀಟರ್ ಹಾಲಿನ ದರವನ್ನು 9 ರೂ. ವರೆಗೆ ಹೆಚ್ಚಳ ಮಾಡಿದೆ. ಇದರಿಂದಾಗಿ ಹಾಲಿನ ಉಪ ಉತ್ಪನ್ನಗಳ ಬೆಲೆಯೂ ಕೂಡ ಹೆಚ್ಚಳವಾಗಿದೆ. ಆದರೆ, ರೈತರಿಗೆ ಕೊಡುವ ಹಾಲಿನ ದರ ಮಾತ್ರ ಅಷ್ಟೇ ಇದೆ. ರೈತರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಟೀಕಿಸಿದರು.

ಸರ್ಕಾರದ ಬೊಕ್ಕಸ ಖಾಲಿ: ಪಂಚ ಗ್ಯಾರಂಟಿ ಹೆಸರಿನಲ್ಲಿ ಜನರಿಂದ ಹಣ ಸೂಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧ ಆಡಳಿತ ನಡೆಸುತ್ತಿದೆ. ಮದ್ಯ, ಸಾರಿಗೆ ಬಸ್ ದರ, ಮುದ್ರಾಂಕ ಶುಲ್ಕ ಸೇರಿ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿದೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರದ ತುಷ್ಟೀಕರಣ ನೀತಿ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ ಎಂದರು.

ಬೆಳಗಾವಿಯಲ್ಲಿ ಏ.16ರಂದು ಬೆಳಗ್ಗೆ 10.30ಕ್ಕೆ ಜನಾಕ್ರೋಶ ಯಾತ್ರೆ ಆರಂಭಗೊಳ್ಳಲಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಸೇರಿ ಶಾಸಕರು, ಸಂಸದರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬೆಳಗಾವಿ ನಂತರ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರದಲ್ಲಿ ಯಾತ್ರೆ ಆರಂಭವಾಗಲಿದೆ. ಎನ್.ರವಿಕುಮಾರ್, ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net