ಗೃಹಲಕ್ಷ್ಮೀ ಯೋಜನೆಗೆ ಜನ ಕರೆತರಲು ಅಧಿಕಾರಿಗಳಿಗೆ ಹೊಣೆ: ಸಿಎಂಗೆ ಪತ್ರ ಬರೆದ ಎನ್.ಆರ್.ರಮೇಶ್

n.r.ramesh
Published on

ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಜವಾಬ್ದಾರಿಯನ್ನು ಸರ್ಕಾರದ ಅಧಿಕಾರಿ, ನೌಕರರಿಗೆ ವಹಿಸಿರುವ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಉದ್ದೇಶಿತ ಕಾರ್ಯಕ್ರಮ ಆ.20ರಂದು ಬೆಳಗಾವಿಯಲ್ಲಿ ಪ್ರಧಾನ ಸಮಾರಂಭ ಬೆಳಗಾವಿಯಲ್ಲಿ ನಡೆಯಲಿದೆ. ಅದೇ ದಿನ ಬೆಂಗಳೂರಿನ ಎಲ್ಲ 198 ವಾರ್ಡ್‌ಗಳಲ್ಲಿ ಹಮ್ಮಿಕೊಳ್ಳಲಿರುವ ಕಾರಣ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಹೊಣೆಯನ್ನು ಪಾಲಿಕೆಯ ಇಂಜಿನಿಯರಿಂಗ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿ, ನೌಕರರಿಗೆ ವಹಿಸಿರುವುದು ಸರ್ಕಾರದಿಂದ ಅಧಿಕಾರ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ.

ಗೃಹಲಕ್ಷ್ಮಿ ಯೋಜನೆಯು ಅರ್ಹತೆಯುಳ್ಳ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪಿದರೆ ಅದನ್ನು ಬಿಜೆಪಿ ಮುಕ್ತವಾಗಿ ಸ್ವಾಗತಿಸುತ್ತದೆ. ಆದರೆ, ರಾಜಕೀಯ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಹೊಣೆಯನ್ನು ಅಧಿಕಾರಿ, ಸಬ್ಬಂದಿಗಳಿಗೆ ನೀಡುವುದು ಎಷ್ಟರಮಟ್ಟಿಗೆ ಸರಿ? ಈ ನಡೆ ಕಾನೂನುಬಾಹಿರ ಎಂದು ರಮೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಯ ಎಲ್ಲ 8 ವಲಯಗಳ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನಿಷ್ಠ 2,000 ಮಂದಿ ಸಾರ್ವಜನಿಕರನ್ನು ಪ್ರತಿಯೊಂದು ವಾರ್ಡ್‌ನಲ್ಲಿ ಸೇರಿಸಬೇಕೆಂಬ ಮೌಖಿಕ ಆದೇಶವನ್ನು ಹೊರಡಿಸಿರುವುದು ಸರ್ಕಾರವು ಸಂವಿಧಾನ ವಿರೋಧಿ ಕಾರ್ಯವನ್ನು ಮಾಡಿದಂತಿದೆ. ಅಲ್ಲದೆ ಸರ್ಕಾರದ ಆದೇಶದಂತೆ ಪ್ರತಿಯೊಂದು ವಾರ್ಡಿನ ಕಾರ್ಯಕ್ರಮಕ್ಕೆ 10,000 ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಕ್ರೀಡಾಂಗಣ, ಸಮುದಾಯ ಭವನ ಇಲ್ಲದ ವಾರ್ಡ್‌ಗಳಲ್ಲಿ ಪಾಲಿಕೆಯ ಅಧಿಕಾರಿಗಳು ಖಾಸಗಿ ಕಲ್ಯಾಣಮಂಟಪಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಒಂದು ದಿನದ ಮಟ್ಟಿಗೆ ಉಚಿತವಾಗಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಈ ನಿಲುವು ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ಧೋರಣೆಯಾಗಿದೆ. ಪಾಲಿಕೆಯ ಅಧಿಕಾರಿ, ನೌಕರರು ಸಾರ್ವಜನಿಕರನ್ನು ಕರೆತರುವ ಕಾರ್ಯಕ್ಕೆ ಮುಂದಾದಲ್ಲಿ ಅದರ ಎಲ್ಲ ವಿಡಿಯೋ ತುಣುಕುಗಳೊಂದಿಗೆ ಸರ್ಕಾರದ ವಿರುದ್ಧ ನ್ಯಾಯಾಲಯದ ಕದ ತಟ್ಟಬೇಕಾಗುತ್ತದೆ ಎಂದು ಎಚ್ಚರಿಸಿರುವ ಎನ್.ಆರ್.ರಮೇಶ್, ಕೂಡಲೇ ಮೌಖಿಕ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net