ಎನ್. ಆರ್. ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ಚಾಲನೆ

Published on

ಮೈಸೂರು: ಎನ್.ಆರ್.ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ನಗರಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ತನ್ವೀರ್‌ಸೇಠ್ ಮಾತನಾಡಿ, ಇ-ಖಾತೆಯ ಮೂಲಕ ತಮ್ಮ ಸಂಪೂರ್ಣವಾದ ಮಾಹಿತಿಯನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ. ಇದನ್ನು ಯಾರಿಂದಲೂ ನಕಲು ಮಾಡಲು ಅಥವಾ ತಿದ್ದುವುದಕ್ಕೆ ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರವೂ ಸಹ ಮಾರಾಟ ಮಾಡುವ ಆಸ್ತಿಗಳು ಕಡ್ಡಾಯವಾಗಿ ಇ-ಖಾತೆ ಮಾಡಿಸಬೇಕಿದೆ. ಹಾಗಾಗಿ ಆಸ್ತಿ ಮಾರುವವರಿಗೆ ಇ-ಖಾತೆ ಮಾಡಿಸಿಕೊಳ್ಳುವ ಆತುರ ಇರುತ್ತದೆ. ಆದರೆ, ಯಾರಿಗೆ ಆತುರ ಇಲ್ಲವೋ ಅಂತಹವರು ತಮ್ಮ ಆಸ್ತಿಯ ಸುರಕ್ಷತೆಯಿಂದ ಕ್ರಮಬದ್ಧವಾಗಿ ಅರ್ಜಿಯನ್ನು ಹಾಕಿ ಇ-ಖಾತೆಯನ್ನು ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಇ-ಖಾತೆಗೆ ಅರ್ಜಿ ಸಲ್ಲಿಸಿದ ಬಳಿಕ ಬೇಗ ಆಗಬೇಕು ಎಂದು ಯಾರೂ ಒತ್ತಡ ತರಬೇಡಿ. ಸಾಮಾನ್ಯವಾಗಿ ಕಚೇರಿಗಳಲ್ಲಿ ಒತ್ತಡ ಇರುತ್ತದೆ. ಅದನ್ನು ತಾಳ್ಮೆಯಿಂದ ಮಾಡಿಕೊಳ್ಳಬೇಕು. ಅಧಿಕಾರಿಗಳೂ ಸಹ ಬಂದಂತಹ ಅರ್ಜಿಯ ಜ್ಯೇಷ್ಠತೆ ಆಧಾರದ ಮೇಲೆ ಕೆಲಸ ಮಾಡಬೇಕು ಎಂದರು.

ನಗರಪಾಲಿಕೆಯಿಂದ ಕಂದಾಯ ವಸೂಲಾತಿ ಆಂದೋಲನ ಮಾಡುವ ಸಂದರ್ಭದಲ್ಲಿ ಯಾವ ಆಸ್ತಿಗೆ ಇ-ಖಾತೆ ಮಾಡಲಾಗಿದೆಯೋ ಅದನ್ನು ಗುರುತಿಸಿ ಯಾವ ಮಾಲೀಕರು ಇ-ಖಾತೆ ಮಾಡಿಸಿಕೊಂಡಿಲ್ಲವೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎನ್.ಆರ್.ನಲ್ಲಿ ಕಂದಾಯ ವಸೂಲಿ ಮಾಡಿ:

ಎನ್.ಆರ್.ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಕಂದಾಯ ವಸೂಲಾತಿ ಆಗುತ್ತಿದೆ. ಆದರೆ ನನ್ನ ಕ್ಷೇತ್ರದಲ್ಲಿ ಆಸ್ತಿ ವಸೂಲಾತಿ ಮಾಡುವ ಪ್ರಕರಣಗಳು ಕಡಿಮೆ ಆಗುತ್ತಿದೆ. ಇದನ್ನು ಆಯುಕ್ತರು ಗಮನಿಸಬೇಕು ಎಂದರು.

ಪ್ರತಿ ವರ್ಷ ಕಂದಾಯ ಪಾವತಿಸುವುದು ಕಡ್ಡಾಯವಾಗಿದೆ. ಯಾರು ಕಂದಾಯ ಪಾವತಿ ಮಾಡುತ್ತಿಲ್ಲವೋ ಅಂತಹವರಿಗೆ ಸೂಚನೆ ನೀಡಿ ಕಂದಾಯ ಪಾವತಿಸುವಂತೆ ಮಾಡಬೇಕು ಎಂದು ಹೇಳಿದರು.

ಬಿ-ಖಾತೆಯಲ್ಲಿ ಗೊಂದಲ:

ಬಿ-ಖಾತೆ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ನಮ್ಮಲ್ಲಿ ಸಾಕಷ್ಟು ಅನಧಿಕೃತ ಬಡಾವಣೆಗಳಿವೆ. ಆ ಬಡಾವಣೆಯ ನಿವಾಸಿಗಳು ಖಾತೆ ಆದರೆ ಸಾಕು ಎಂದು ಕಾಯುತ್ತಿದ್ದಾರೆ. ಇದರ ಬಗ್ಗೆ ಇಲಾಖೆಗಳಿಂದ, ನಗರಪಾಲಿಕೆಯಿಂದ ಯಾವುದೇ ರೀತಿಯ ಸ್ಪಷ್ಟತೆ ಬಂದಿಲ್ಲ ಎಂದು ಗಮನಕ್ಕೆ ತಂದರು.

ಉಪನೋಂದಣಾಕಾರಿಗಳ ಕಚೇರಿಯಲ್ಲಿ ನೋಂದಾಯಿತ ಆಸ್ತಿಗಳಿಗೆ ಮಾತ್ರ ಬಿ-ಖಾತೆ ನೀಡುತ್ತಿದ್ದಾರೆ. ಆದರೆ 5, 10 ರೂ. ಛಾಪ ಕಾಗದ ಮೇಲೆ ವಹಿವಾಟು ಮಾಡಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಬಿ-ಖಾತೆ, ಎ-ಖಾತೆ ಏನೂ ಕೊಡಲು ಆಗುತ್ತಿಲ್ಲ ಎಂದರು.

ನಗರ ಪಾಲಿಕೆ ಆಯುಕ್ತ ಷೇಕ್ ತನ್ವೀರ್ ಆಸೀಫ್ ಮಾತನಾಡಿ, ಬಿ-ಖಾತಾ ಆಂದೋಲನ ಹಾಗೂ ಇ-ಆಸ್ತಿ ಆಂದೋಲನವನ್ನು ಅತ್ಯಂತ ವೇಗವಾಗಿ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಇ-ಆಸ್ತಿಗಳನ್ನು ಜನರಿಗೆ ಹಂಚಿದ್ದೇವೆ ಎಂದು ವಿವರಿಸಿದರು.

ಮೂರು ವಲಯಗಳಲ್ಲಿ 54 ಸಾವಿರಕ್ಕೂ ಹೆಚ್ಚು ಅಧಿಕೃತ ಆಸ್ತಿಗಳಿದ್ದವು. ಅವುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತೆ ನೀಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net