ಕನ್ನಡದಲ್ಲಿ ಅಶೋಕನ ಕೃತಿ ಪ್ರಕಟಿಸಿದ ಮೊದಲಿಗ ನಾ.ಕಸ್ತೂರಿ

book release
Published on

ಬೆಂಗಳೂರು: ಆಧುನಿಕ ಸಾಹಿತ್ಯದಲ್ಲಿ ಹಾಸ್ಯಕ್ಕೊಂದು ವಿಶೇಷ ಸ್ಥಾನವನ್ನು ನಿರ್ಮಿಸಿಕೊಟ್ಟ ನಾ.ಕಸ್ತೂರಿ ಅವರು ಕನ್ನಡದಲ್ಲಿ ಸಾಮ್ರಾಟ್ ಅಶೋಕನ ಕುರಿತು ಮೊದಲ ಬಾರಿಗೆ ಪುಸ್ತಕ ಪ್ರಕಟಿಸಿದ ಶ್ರೇಯ ಹೊಂದಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದರು.

ನಗರದ ಮಿಥಿಕ್ ಸೊಸೈಟಿಯಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಡಾ. ಸಿ. ಚಂದ್ರಪ್ಪ ಅವರ ‘ಅಶೋಕ’ ಬೃಹತ್ ಕೃತಿಯ ಲೋಕಾರ್ಪಣೆಗೊಳಿಸಿ ಭಾನುವಾರ ಮಾತನಾಡಿದ ಅವರು, ನಾ. ಕಸ್ತೂರಿಯವರು ಆ ಕಾಲಕ್ಕೆ ಲಭ್ಯವಿದ್ದ ಎಲ್ಲ ಮಾಹಿತಿಯನ್ನು ಅಭ್ಯಸಿಸಿ ರಚಿಸಿದ್ದ ಅಶೋಕ ಕೃತಿಯನ್ನು ಮೈಸೂರು ವಿವಿ ಪ್ರಕಟಿಸಿತ್ತು. ಅದನ್ನು ನಾನು 4 ದಶಕಗಳ ಹಿಂದೆ ಓದಿದ್ದೆ. ಆನಂತರ ಅಶೋಕನನ್ನು ಕುರಿತು ಬಿಡಿ ಬಿಡಿ ಬರಹಗಳು ಕನ್ನಡದಲ್ಲಿ ಬಂದಿದ್ದವು. ಈಗ ಚಂದ್ರಪ್ಪ ಅವರು ಅಶೋಕನ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿ ಬೃಹತ್ ಕೃತಿಯನ್ನು ಪ್ರಕಟಿಸಿರುವುದು ಪ್ರಾಚೀನ ಭಾರತದ ಇತಿಹಾಸವನ್ನು ತಿಳಿಸುತ್ತದೆ ಎಂದರು.

ಪಂಥಗಳ ಹಂಗಿಲ್ಲದೆ ವಿಷಯಕ್ಕೆ ನಿಷ್ಠವಾದ ಕೃತಿ:

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ, ಇತಿಹಾಸ ಪ್ರಾಧ್ಯಾಪಕ ಡಾ. ವಿಜಯ ಪೂಣಚ್ಚ ತಂಬಂಡ ಮಾತನಾಡಿ, ಈ ಕೃತಿಯಲ್ಲಿ ಎಡ-ಬಲ ಯಾವುದೇ ಪಂಥಕ್ಕೂ ನಿಷ್ಠೆ ತೋರದೆ, ವಿಷಯಕ್ಕೆ ನಿಷ್ಠರಾಗಿ ಇಲ್ಲಿಯವರೆಗೆ ಅಶೋಕನ ಬಗ್ಗೆ ಬಂದಿರುವ ಎಲ್ಲ ಮಾಹಿತಿಯನ್ನು ಸಮಗ್ರವಾಗಿ ಕಟ್ಟಿಕೊಡಲಾಗಿದೆ. ದಕ್ಷಿಣ ಭಾರತದಲ್ಲಿ ಅಶೋಕನ 13 ಶಾಸನಗಳು ದೊರೆತಿದ್ದು, ಇದರಲ್ಲಿ 11 ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿರುವುದು ವಿಶೇಷ. ಕೃತಿಯಲ್ಲಿ ಶಾಸನಗಳ ವಿಷಯವನ್ನು ಸಂಕ್ಷಿಪ್ತವಾಗಿ ನೀಡಿರುವ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.

ಸಮಾರಂಭದಲ್ಲಿ ಕೃತಿಯ ಲೇಖಕ ಡಾ. ಸಿ. ಚಂದ್ರಪ್ಪ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಶಾ, ದೊಡ್ಡೆಗೌಡ ಹಾಗೂ ಇತರರಿದ್ದರು.

ಪ್ರಸ್ತುತ ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅಶೋಕನ ಶಾಸನಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿದ್ವಾಂಸರು, ಸಂಶೋಧಕರು, ಸ್ಫರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ತುಂಬಾ ಅನುಕುಲವಾಗುವ ಕೃತಿ ಇದಾಗಿದೆ. 700ಕ್ಕೂ ಹೆಚ್ಚು ಪುಟಗಳ ಈ ಕೃತಿ ಅಶೋಕನ ಚಿತ್ರಣಕ್ಕಷ್ಟೇ ಸೀಮಿತವಾಗದೆ ಆ ಕಾಲದ ಭಾರತದ ಚರಿತ್ರೆಯನ್ನು ಪರಿಚಯಿಸುತ್ತದೆ.

- ಡಾ. ಎಂ. ಕೊಟ್ರೇಶ್, ಇತಿಹಾಸ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net