

ಕಡಬ: ಕನ್ನಡ ಸಾಹಿತ್ಯ ಪರಿಷತ್‌ನ ನೇತೃತ್ವದಲ್ಲಿ ಕುಂತೂರು ಪದವಿನ ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನ.30ರಂದು ನಡೆಯಲಿರುವ ಕಡಬ ತಾಲೂಕು 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬರಹಗಾರ, ಸಾಮಾಜಿಕ ಮುಂದಾಳು ಎನ್.ಕರುಣಾಕರ ಗೋಗಟೆ ಹೊಸಮಠ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಶ್ರೀನಾಥ್ ಘೋಷಿಸಿದ್ದಾರೆ ಎಂದು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ತಿಳಿಸಿದ್ದಾರೆ.
ಹಳ್ಳಿ ಬದುಕಿನ ಚಿತ್ರಣ ನೀಡುವ ಕೃತಿ ‘ಒಂದು ಸೇತುವೆಯ ಕಥೆ ’ ಹಾಗೂ ಉರುಂಬಿ ಜಲ ವಿದ್ಯುತ್ ಯೋಜನೆಯ ವಿರುದ್ಧ ನಡೆದ ಹೋರಾಟದ ಹಾದಿಯನ್ನು ನೆನಪಿಸುವ ‘ಉರುಂಬಿ ಸಂರಕ್ಷಣೆಯ ಯಶಸ್ಸಿನಲ್ಲಿ’ ಎನ್ನುವ ಪುಸ್ತಕಗಳನ್ನು ಬರೆದಿರುವ ಹೊಸಮಠ ಸಹಕಾರಿ ರತ್ನ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿ ಅಧ್ಯಕ್ಷರಾಗಿ, ಅತ್ಯುತ್ತಮ ಭಜನ ಪಟುವಾಗಿ, ಪರಿಸರವಾದಿಯಾಗಿ, ಸಹಕಾರ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಕ್ಷಗಾನ, ಸಾಹಿತ್ಯ ಸಂಘಟನೆ, ಲೇಖನ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿರುತ್ತಾರೆ.