

ಮೈಸೂರು: ರಾಮೇಶ್ವರ ಕಾಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಎನ್.ಐ. ಎ ತಂಡ ಮತ್ತು ಕರ್ನಾಟಕ ಪೊಲೀಸ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಅವರು ಶನಿವಾರ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಆರೋಪಿಗಳನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆ ತಂದ ನಂತರ ವಿಚಾರಣೆ ಮಾಡಿ ಹೆಚ್ಚಿನ ವಿವರ ಪಡೆಯಲಾಗುವುದು ಎಂದರು.
ಎನ್‌ಡಿಎಗೆ ಪೂರ್ಣ ಬಹುಮತ ದೊರಕುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧವಿರುವ ಇಂಡಿಯಾ ಮೈತ್ರಿಗೆ ಬಹುಮತ ದೊರೆಯಲಿದೆ ಎಂದರು. 400 ಕ್ಕೂ ಹೆಚ್ಚು ಸ್ಥಾನಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ ಎಂದರು.
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಬಂದು ಹೋಗಲು ನನ್ನದೇನೂ ತಕರಾರಿಲ್ಲ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಹೇಳಬೇಕು. ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಉತ್ತರ ಹೇಳಲಿ ಎಂದರು.