

ಪಾಂಡವಪುರ : ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ 14 ವರ್ಷ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿಯಲ್ಲಿ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಕ್ರೀಡಾಪಟು ಎನ್.ಹೊನ್ನು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಿಟ್ಟಿಸಿಕೊಳ್ಳುವ ಜತೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯದ ಕಾರ್ಮೆಲ್ ಕಾನ್ವೆಂಟ್‌ನ ವಿದ್ಯಾರ್ಥಿಯಾದ ಎನ್.ಹೊನ್ನು ಜಿಲ್ಲಾ ಮಟ್ಟದ ಕಬಡ್ಡಿ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಆದಿಚುಂಚನಗಿರಿಯಲ್ಲಿ ನ.23 ಮತ್ತು 24 ರಂದು ನಡೆದ ಬಾಲಕಿಯರ ಕ್ರೀಡಾಕೂಟದಲ್ಲಿ ಮತ್ತಷ್ಟು ಸಾಧನೆಗೈಯುವ ಮೂಲಕ ಜ.26 ಮತ್ತು 27 ರಂದು ಆಂಧ್ರ ಪ್ರದೇಶದ ಕಡಪದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಉತ್ತಮ ಸಾಧನೆಗೈಯಲು ತರಬೇತಿ ನೀಡಿದ್ದ ಕಬಡ್ಡಿ ತರಬೇತುದಾರರಾದ ರೂಪ, ಕೂಡಲಕುಪ್ಪೆ ಮಹದೇವು ಹಾಗೂ ಕ್ರೀಡಾಪಟುವಿ ತಂದೆ ನಿರಂಜನ್ ಬಾಲಕಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.