ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎನ್.ಬಿ.ಮಂಜು, ಉಪಾಧ್ಯಕ್ಷರಾಗಿ ಕಾಟೂರು ಕ್ಷೇತ್ರದ ಎಂ.ಶಿವಣ್ಣ ಆಯ್ಕೆ

7
Published on

ಮೈಸೂರು ತಾಲೂಕು ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಸಹಕಾರ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷರಾಗಿ ಕಲ್ಲೂರು-ನಾಗನಹಳ್ಳಿ ಕ್ಷೇತ್ರದ ಎನ್.ಬಿ.ಮಂಜು, ಉಪಾಧ್ಯಕ್ಷರಾಗಿ ಕಾಟೂರು ಕ್ಷೇತ್ರದ ಎಂ.ಶಿವಣ್ಣ ಆಯ್ಕೆಯಾಗಿದ್ದಾರೆ.

ಈ ಮೂಲಕ ಸಹಕಾರಿ ಧುರೀಣರೂ ಆದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಬಣ ಮತ್ತೊಮ್ಮೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ಪಿಎಲ್‌ಡಿ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹದಿನೈದು ಜನರು ಆಯ್ಕೆಯಾಗಿದ್ದರು.

ಶನಿವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರ ಬೆಂಬಲಿತರಾದ ಎನ್.ಬಿ.ಮಂಜುನಾಥ್ ಮತ್ತು ಎಂ.ಶಿವಣ್ಣ ನಾಮಪತ್ರ ಸಲ್ಲಿಸಿದರೆ, ಎದುರಾಳಿಯಾಗಿ ಕುಪ್ಪೇಗಾಲ ಕ್ಷೇತ್ರದ ಸತೀಶ್, ಕೆರೆಹುಂಡಿಯ ಜಯಮ್ಮನಾಮಪತ್ರ ಸಲ್ಲಿಸಿದ್ದರು. ಯಾರೂ ಕೂಡ ತಮ್ಮ ನಾಮಪತ್ರ ವಾಪಸ್ ಪಡೆಯದ ಕಾರಣ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಗಳು ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್.ಬಿ.ಮಂಜುಗೆ 9 ಮತಗಳು, ಸತೀಶ್ ಅವರಿಗೆ 6ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿದ್ದ ಎಂ.ಶಿವಣ್ಣರಿಗೆ 9ಮತಗಳು ಹಾಗೂ ಜಯಮ್ಮ 6ಮತಗಳನ್ನು ಪಡೆದರು. ಅಂತಿಮವಾಗಿ ಹೆಚ್ಚಿನ ಮತಗಳನ್ನು ಪಡೆದ ಎನ್.ಬಿ.ಮಂಜು ಅಧ್ಯಕ್ಷ ಮತ್ತು ಎಂ.ಶಿವಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.

ಚುನಾವಣೆಯಲ್ಲಿ ನಿರ್ದೇಶಕರಾದ ಪಿ.ಎಚ್.ರಾಮೇಗೌಡ, ಡಿ.ಬಿ.ನಾಗರಾಜು, ಎಸ್.ಮಹದೇವಪ್ಪ, ವಿಜಯ, ಎಂ.ಕುಮಾರ್, ಮಹದೇವು, ಆರ್.ಸಿಂಧು,ಯಶೋಧಮ, ಜಯಮ್ಮ, ಸಿದ್ದಯ್ಯ, ರಾಜು ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಮಂಜು ಕಾರ್ಯ ನಿರ್ವಹಿಸಿದರು. ವ್ಯವಸ್ಥಾಪಕ ಜಿ.ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net