

ಬೆಂಗಳೂರು: ಕ್ರಿ.ಪೂ. 500ರಲ್ಲಿ ಬರೆಯಲಾಗಿದೆ ಎಂದು ನಂಬಲಾದ ವೃದ್ಧಗರ್ಗನ ವಾಸ್ತುವಿದ್ಯಾ ಹಸ್ತಪ್ರತಿಯ ವೈಜ್ಞಾನಿಕ ಅಧ್ಯಯನದಿಂದ ಪ್ರಾಚಿನ ಕಾಲದ ನಗರ ವಿನ್ಯಾಸ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಕುರಿತು ಹೊಸ ವಿಷಯಗಳನ್ನು ತಿಳಿಯಲು ಸಾಧ್ಯವಾಗುತ್ತಿದೆ ಎಂದು ಸಂಸ್ಕೃತ ವಿದ್ವಾಂಸ ವಾರಿಜ ಅಡಿಗ ಹೇಳಿದ್ದಾರೆ.
ಮಿಥಿಕ್ ಸೊಸೈಟಿ ಭಾನುವಾರ ಆಯೋಜಿಸಿದ್ದ ಪೊ.ಜಿ.ಎಸ್. ದೀಕ್ಷಿತ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ "ವೃದ್ಧಗರ್ಗ ವಾಸ್ತುವಿದ್ಯಾ ಗ್ರಂಥ' ವಿಷಯ ಕುರಿತು ಉಪನ್ಯಾಸ ನೀಡಿದರು. ನೇಪಾಳದ ಕಠ್ಮಂಡುವಿನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ದೊರೆತ ಅಪ್ರಕಟಿತ ಈ ಹಸ್ತಪ್ರತಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಪ್ರಾಚಿನ ಇತಿಹಾಸ ಅಧ್ಯಯನ ಕೇಂದ್ರದ ವಿದ್ವಾಂಸರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ಹಸ್ತಪ್ರತಿಯಲ್ಲಿ ಸಂಸ್ಕೃತ ಹಾಗೂ ನೇಪಾಳದ ಭಿಜುಮೋಲ್ ಭಾಷೆಯಲ್ಲಿ 34 ಅಧ್ಯಾಯಗಳು ಹಾಗೂ 930ಕ್ಕೂ ಹೆಚ್ಚು ಶ್ಲೋಕಗಳನ್ನು ಬರೆಯಲಾಗಿದೆ ಎಂದು ತಿಳಿಸಿದರು.
ನಗರ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಸ್ಥಪತಿಯು ಕಟ್ಟಡ ನಿರ್ಮಾಣಕ್ಕೂ ಮುನ್ನ ಕೂಲಂಕಷವಾಗಿ ನಿವೇಶನದ ಭೂಮಿ ಪರೀಕ್ಷೆ ನಡೆಸುತ್ತಿದ್ದರು ಎಂದು ಗ್ರಂಥದಲ್ಲಿ ವಿವರಿಸಲಾಗಿದೆ. ಈ ಹಸ್ತಪ್ರತಿಯ ಮತ್ತಷ್ಟು ವೈಜ್ಞಾನಿಕ ವಿಶ್ಲೇಷಣೆಯಿಂದ ಭಾರತೀಯರು ಕಟ್ಟಡ ವಿಜ್ಞಾನ ತಂತ್ರಜ್ಞಾನ ಕುರಿತಂತೆ ನೀಡಿದ ವಿಶೇಷ ಕೊಡುಗೆಗಳ ಬಗ್ಗೆ ಮತ್ತಷ್ಟು ಹೊಸಬೆಳಕನ್ನು ಚೆಲ್ಲಬಹುದು ಎಂದು ಅಭಿಪ್ರಾಯಪಟ್ಟರು.
ಭಾರತೀಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಹೊಸ ಚಿಂತನೆಯ ಅವಶ್ಯಕತೆ ಇದೆ ಎಂದು ಮಿಥಿಕ್ ಸೊಸೈಟಿ ಉಪಾಧ್ಯೆ ಡಾ.ವಿ. ಅನುರಾಧಾ ಹೇಳಿದರು. ಪೊ.ಆರ್.ಎನ್. ಅಯ್ಯಂಗಾರ್, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್. ರವಿ, ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನಕುಮಾರ್ ಮತ್ತಿತರರಿದ್ದರು.