ಮೈಸೂರು: ‘ದತ್ತುಪುತ್ರ’ ಎಂಬ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕೆಗೆ ಪ್ರತಿಕ್ರಿಯಿಸಿದ ಯದುವೀರ್, ಹೌದು ನಾನು ದತ್ತು ಪುತ್ರನೇ. ಅದು ವಾಸ್ತವ ವಿಚಾರ, ಅದರಲ್ಲೇನಿದೆ ಎಂದು ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದತ್ತು ಪುತ್ರ ಅಥವಾ ಇನ್ನೊಂದು ಪುತ್ರನಾದರೂ ನಾವೆಲ್ಲರೂ ಭಾರತೀಯ ಪ್ರಜೆಗಳು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಪ್ರಜೆಗಳೇ. ಯಾರಿಗೂ ವಿಶೇಷ ಸ್ಥಾನ ಇಲ್ಲ. ವೈಯಕ್ತಿಕ ಟೀಕೆಗಳ ಕುರಿತು ನಾನು ಮಾತನಾಡಲು ಹೋಗುವುದಿಲ್ಲ. ವಿಚಾರಗಳ ಮೇಲೆ ಚರ್ಚೆ ಮಾಡೋಣ. ಆದರೆ, ವೈಯಕ್ತಿಕ ಟೀಕೆಯಿಂದ ಯಾರಿಗೂ ಲಾಭ ಇಲ್ಲ ಎಂದರು.
ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂಬುದು ಜನರಿಗೆ ತಿಳಿದಿದೆ. ಕಾಂಗ್ರೆಸ್ ಪತ್ರಿಕೆಗಳು, ಸೋನಿಯಾ ಗಾಂಧಿ ಪುಸ್ತಕ ಓದುತ್ತಾ ಕೂತರೆ ನಾನು ಮಾಡಿರುವ ಅಭಿವೃದ್ಧಿ ಕಾರ್ಯ ಅವರಿಗೆ ತಿಳಿಯವುದಿಲ್ಲ ಎಂದು ಲಕ್ಷ್ಮಣ್ಗೆ ತಿರುಗೇಟು ನೀಡಿದರು.
ಕಲ್ಯಾಣಿ ಪುನಶ್ಚೇತನ:
ಅಮೃತ ಯೋಜನೆಯಡಿ ನಗರದ ಸರಸ್ವತಿಪುರಂನ ಈಜುಕೊಳದ ಬಳಿ ಇರುವ ಕಲ್ಯಾಣಿಯ ಪುನಶ್ಚೇತನಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದಾಗಿದ್ದಾರೆ. ಒಟ್ಟು 4.73 ಕೋಟಿ ರೂ.ವೆಚ್ಚದಲ್ಲಿ ಕಲ್ಯಾಣಿಗೆ ಮರುಜೀವ ನೀಡಲು ರೂಪುರೇಷೆ ಸಿದ್ಧಪಡಿಸಲಾಗಿದ್ದು, ಮಂಗಳವಾರ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಗೆ ಟೆಂಡರ್ ಮುಕ್ತಾಯವಾದ ಕೂಡಲೇ ಕಾಮಗಾರಿಗೆ ಕೈಗೊಳ್ಳಲಾಗುವುದು. ನಗರದ ವಿವಿಧೆಡೆ ಇದೇ ರೀತಿ 3 ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಯದುವೀರ್ ಹೇಳಿದರು.