ಹೆರಿಗೆ ಸಮಯದಲ್ಲಿ ತಾಯಿ, ಮಗು ಸಾವು

ವೈದ್ಯರ ನಿರ್ಲಕ್ಷೃವೆಂದು ಆರೋಪಿಸಿ ಸಂಬಂಧಿಕ ಆಕ್ರೋಶ
ಕೆ.ಆರ್.ನಗರ: ಪಟ್ಟಣದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ಬಳಿ ಮೃತರ ಪಾಲಕರು, ಸಂಬಂಧಿಕರು ಹಾಗೂ ಸಾರ್ವಜನಿಕರು ವೈದ್ಯರ ನಿರ್ಲಕ್ಷೃದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟ ಸುಶ್ಮಿತಾ ರವರ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ.
Published on: 

ಕೆ.ಆರ್.ನಗರ: ಪಟ್ಟಣದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ಬಳಿ ಮೃತರ ಪಾಲಕರು, ಸಂಬಂಧಿಕರು ಹಾಗೂ ಸಾರ್ವಜನಿಕರು ವೈದ್ಯರ ನಿರ್ಲಕ್ಷೃದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಳಲಿ ಗ್ರಾಮದ ಮಹೇಶ್ ಅವರ ಪತ್ನಿ ಸುಶ್ಮಿತಾ(24), ನವಜಾತ ಗಂಡು ಶಿಶು ಹೆರಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಸುಶ್ಮಿತಾ ಅವರನ್ನು ಹೆರಿಗೆಗಾಗಿ ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗು ಏಕಕಾಲದಲ್ಲಿ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಸೇರಿ, ತಾಯಿ ಮತ್ತು ಮಗುವಿನ ಸಾವಿಗೆ ವೈದ್ಯ ಪ್ರಸೂತಿ ತಜ್ಞ ಡಾ.ಹರ್ಷಕುಮಾರ್ ನಿರ್ಲಕ್ಷ್ಯವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಹೆರಿಗೆ, ತಪಾಸಣೆ ಮತ್ತು ಚಿಕಿತ್ಸೆಗೆಂದು ಬಂದಿದ್ದ ನೂರಾರು ಮಂದಿ ಗರ್ಭಿಣಿಯರು, ಮಹಿಳೆಯರು ಹಾಗೂ ಮಕ್ಕಳು ಪರದಾಡುವಂತಾಯಿತು.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಇನ್‌ಸ್ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡುತ್ತಿದ್ದರು.

ಸ್ಥಳಕ್ಕಾಗಮಿಸಿದ ಶಾಸಕ ಡಿ.ರವಿಶಂಕರ್ ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಸಮಧಾನಪಡಿಸಿ ಅವರ ದೂರು ಆಲಿಸಿದರು. ನಂತರ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು ಕರ್ತವ್ಯದಲ್ಲಿದ್ದ ಡಾ.ಹರ್ಷಕುಮಾರ್ ಅವರು ಹೆರಿಗೆ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಶಾಸಕರು ಹಾಗೂ ಮೃತೆಯ ಪಾಲಕರು, ಸಂಬಂಧಿಕರಿಗೆ ಮಾಹಿತಿ ನೀಡಿ ಹೆರಿಗೆ ಸಮಯದಲ್ಲಿ ಬಿಪಿ ಏರುಪೇರಾಗಿ ತೀವ್ರ ಹೃದಯಾಘಾತಕ್ಕೆ ಒಳಪಟ್ಟು ಮೃತಪಟ್ಟಿದ್ದಾರೆ. ಇದರಲ್ಲಿ ನನ್ನ ಮತ್ತು ನಮ್ಮ ಸಿಬ್ಬಂದಿ ನಿರ್ಲಕ್ಷತೆ ತೋರಿಲ್ಲ ಎಂದು ತಿಳಿಸಿದರು.

ಶಾಸಕ ಡಿ.ರವಿಶಂಕರ್ ತಾಯಿ ಮತ್ತು ಮಗುವಿನ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ನಮ್ಮ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಉತ್ತಮ ಹೆಸರು ಇದೆ. ಹೆಸರಾಂತ ತಜ್ಞ ವೈದ್ಯರು ಇದ್ದಾರೆ. ಈ ಆಸ್ಪತ್ರೆಯಲ್ಲಿ ಪ್ರತಿದಿನ ಹತ್ತಾರು ಮಕ್ಕಳು ಜನಿಸುತ್ತಿವೆ. ಆದರೆ ಇಂಥಹ ಪ್ರಕರಣ ಎಂದೂ ಸಂಭವಿಸಿರಲಿಲ್ಲ. ಮೇಲ್ನೋಟಕ್ಕೆ ಇದರಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಯಾವುದೇ ನಿರ್ಲಕ್ಷತೆ ಇರುವುದಿಲ್ಲ. ಆದರೂ ನಾನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಕಡೆಯಿಂದ ಮೃತೆಯ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಕೊಡಿಸುವುದರ ಜತೆಗೆ ಮೃತೆಯ ಪತಿಗೆ ಹಂಗಾಮಿ ನೌಕರಿ ಕೂಡಿಸುವ ಭರವಸೆ ನೀಡಿದರು.

ಆಸ್ಪತ್ರೆ ಆವರಣದಲ್ಲಿ ಮೃತೆಯ ಪಾಲಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಎಲ್ಲರೂ ಮಾತುಕತೆ ನಡೆಸಿ ಶಾಸಕರಿಗೆ ಗೌರವ ಕೊಟ್ಟು ಯಾವುದೇ ದೂರು ನೀಡದೆ ಶವವನ್ನು ತೆಗೆದುಕೊಂಡು ಹೋಗಲು ಒಮ್ಮತದ ತೀರ್ಮಾನಕ್ಕೆ ಬಂದು ಶವಗಳನ್ನು ತೆಗೆದುಕೊಂಡು ತೆರಳಿದರು.

ಟಿಎಚ್‌ಒ ಡಾ.ಸಂತೋಷ್, ಡಾ.ನಟರಾಜ್, ಡಾ.ದರ್ಶನ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಆರೋಗ್ಯ ರಕ್ಷಾ ಕಮಿಟಿ ಸದಸ್ಯ ಲೋಕೇಶ್, ಮಳಲಿ ಗ್ರಾಮಸ್ಥರು ಹಾಜರಿದ್ದರು.