ಹುಲಿ ದಾಳಿಗೆ ಎರಡು ಹಸು ಬಲಿ

Two cows fall victim to tiger attack
Two cows fall victim to tiger attack
ಎಚ್ ಡಿ ಕೋಟೆ ತಾಲೂಕಿನ ಬೀರಂಬಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಒಳಗಾದ ಹಸುವಿನ ಕಳೇಬರ ಪರಿಶೀಲನೆ ಮಾಡಿದ ಗುಂಡ್ರೆ ವಲಯದ ಅರಣ್ಯ ಇಲಾಖೆ ಸಿಬ್ಬಂದಿ. tiger attack
Published on: 

ಎಚ್.ಡಿ.ಕೋಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಅರಣ್ಯ ವ್ಯಾಪ್ತಿಯ ಬೀರಂಬಳ್ಳಿ ಹಾಗೂ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಹುಲಿ ದಾಳಿಗೆ ಎರಡು ಹಸು ಬಲಿಯಾಗಿವೆ.

ಬೀರಂಬಳ್ಳಿ ಗ್ರಾಮದ ನಾಗಣ್ಣ ಮತ್ತು ಹೊಸಹಳ್ಳಿ ಗ್ರಾಮದ ದೇವಮ್ಮ ಎಂಬುವರ ಹಸುಗಳೇ ಹುಲಿ ದಾಳಿಗೆ ತುತ್ತಾಗಿವೆ.

ಗುರುವಾರ ಬೀರಂಬಳ್ಳಿ ಗ್ರಾಮದ ನಾಗಣ್ಣ ಕಬಿನಿ ಹಿನ್ನೀರಿನಲ್ಲಿ ಜಾನುವಾರುಗಳನ್ನು ಮೇಯಿಸಿಕೊಮಡು ವಾಪಸ್ ಸಂಜೆ ಮನೆಗೆ ಬರುವ ಸಂದರ್ಭದಲ್ಲಿ ಒಂದು ಹಸು ಹಿಂದೆ ಉಳಿದಿದೆ. ಮನೆಗೆ ಬರುತ್ತದೆ ಎಂದು ಬಂದ ರೈತ ರಾತ್ರಿ ಎಷ್ಟು ಹೊತ್ತಾದರೂ ಬಾರದೆ ಇದ್ದ ಕಾರಣ ಶುಕ್ರವಾರ ಬೆಳಗ್ಗೆ ಹಸು ಹುಡುಕಿಕೊಂಡು ಹೋದಾಗ ಹುಲಿ ದಾಳಿಗೆ ಸಿಲುಕಿ ಸತ್ತಿರುವುದು ಕಂಡುಬಂದಿದೆ.

ಹೊಸಹಳ್ಳಿ ಗ್ರಾಮದ ದೇವಮ್ಮ ಅವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಈ ವೇಳೆ ಕೊಟ್ಟಿಗೆಯಲ್ಲಿ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದು ನೋಡಿದಾಗ ಹುಲಿ ಹಸುವಿನ

ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಿ ಚೀರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹುಲಿ ಹಸುವಿನ ಕಳೇಬರವನ್ನು ಬಿಟ್ಟು ಕಬಿನಿ ಹಿನ್ನೀರಿನ ಕಡೆ ಓಡಿಹೋಗಿದೆ.

ಇದರಿಂದ ಭಯಭೀತರಾದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗುಂಡ್ರೆ ಅರಣ್ಯ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಚಲನವಲನ ತಿಳಿಯಲು ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಎರಡು ಕ್ಯಾಮರಾ ಅಳವಡಿಸಿದ್ದಾರೆ.

ಹುಲಿ ದಾಳಿಗೆ ಒಳಗಾದ ಹಸುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಹಸುಗಳ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ವಹಿಸಿದ್ದಾರೆ.