ಹದಿಹರೆಯದಲ್ಲಿ ಆಕರ್ಷಣೆಗೆ ಒಳಗಾಗದೆ ಗುರಿ ಸಾಧಿಸಿ

ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕಿ ಎ.ಎಂ. ಮಧುಶ್ರೀ ಸಲಹೆ
ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಪ್ರೇರಣಾತ್ಮಕ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಎ.ಎಂ ಮಧುಶ್ರೀ ಮಾತನಾಡಿದರು. ಚಂದ್ರಶೇಖರ, ಜೆ.ಸಿ.ನಟರಾಜ್, ಸತೀಶ್, ಮುರುಳಿಕೃಷ್ಣ, ರಾಮಶೆಟ್ಟಿ ಇತರರಿದ್ದರು.
ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಪ್ರೇರಣಾತ್ಮಕ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಎ.ಎಂ ಮಧುಶ್ರೀ ಮಾತನಾಡಿದರು. ಚಂದ್ರಶೇಖರ, ಜೆ.ಸಿ.ನಟರಾಜ್, ಸತೀಶ್, ಮುರುಳಿಕೃಷ್ಣ, ರಾಮಶೆಟ್ಟಿ ಇತರರಿದ್ದರು.
Published on: 

ಬೆಟ್ಟದಪುರ: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಬೇಡದ ಸಂಗತಿಗಳ ಬಗ್ಗೆ ಆಕರ್ಷಣೆಯಾಗದೆ ಶಿಕ್ಷಣ ಮತ್ತು ಭವಿಷ್ಯದ ಗುರಿಯತ್ತ ಗಮನಹರಿಸಬೇಕು ಎಂದು ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಎ.ಎಂ ಮಧುಶ್ರೀ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ವಿಶೇಷ ಪ್ರೇರಣಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹದಿಹರೆಯವು ಜೀವನದ ಅತ್ಯಂತ ಸೂಕ್ಷ್ಮ ಹಂತವಾಗಿದ್ದು, ಈ ಅವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಸಹಜವಾಗಿ ಆಗುತ್ತವೆ. ಹೊಸ ವ್ಯಕ್ತಿಗಳತ್ತ ಆಕರ್ಷಣೆ ಉಂಟಾಗುವುದು ಕೂಡ ಸಹಜ. ಆದರೆ, ಆಕರ್ಷಣೆಯನ್ನು ಪ್ರೀತಿ ಎಂದು ಭಾವಿಸಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದರು.

ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ನಿಯಂತ್ರಿಸುವುದನ್ನು ಕಲಿಯಬೇಕು. ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪಾಲಕರು, ಶಿಕ್ಷಕರು ಅಥವಾ ನಂಬಿಕೆಯ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ಸಮಸ್ಯೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒತ್ತಡಕ್ಕೆ ಒಳಗಾಗುವುದು ಪರಿಹಾರವಲ್ಲ ಎಂದು ಸಲಹೆ ನೀಡಿದರು.

ಮೊಬೈಲ್ ಮೇಲೆ ಹಿಡಿತವಿರಲಿ: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಜ್ಞಾನ ಪಡೆಯಲು ಸಹಾಯಕವಾಗಬಹುದು. ಆದರೆ ಅವುಗಳ ಅತಿಯಾದ ಬಳಕೆ ಸಮಯದ ವ್ಯರ್ಥ, ಏಕಾಗ್ರತೆಯ ಕೊರತೆ, ನಿದ್ರೆಯ ಸಮಸ್ಯೆ ಹಾಗೂ ಓದಿನ ಮೇಲೆ ಆಸಕ್ತಿ ಕಡಿಮೆಯಾಗಲು ಕಾರಣವಾಗಬಹುದು. ಓದುವ ಸಮಯದಲ್ಲಿ ಮೊಬೈಲ್ ದೂರವಿಟ್ಟು, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ, ಆಡಳಿತಾಧಿಕಾರಿ ಜೆ.ಸಿ.ನಟರಾಜ್, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕರಾದ ಮುರುಳಿಕೃಷ್ಣ, ರಾಮಶೆಟ್ಟಿ, ಜಯಂತಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net