ಮೈಸೂರು: ಜ್ಞಾನ ಮತ್ತು ಅನುಭವ ಮಾತ್ರ ಸಮಾಜದಲ್ಲಿ ನಮ್ಮನ್ನು ಸ್ವಾವಲಂಬಿಯಾಗಿ ಎದ್ದು ನಿಲ್ಲುವಂತೆ ಮಾಡುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಿಂದ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಜೀವನ ರೂಪಿಸಿಕೊಂಡು ಆರ್ಥಿಕವಾಗಿ ಸದೃಢರಾಗುವ ಅಪಾರ ಶಕ್ತಿ ಹೆಣ್ಣು ಮಕ್ಕಳಿಗಿದೆ. ಹಾಗಾಗಿ ಜೀವನದಲ್ಲಿ ಗುರಿ ನಿಗದಿಪಡಿಸಿಕೊಂಡು ಉನ್ನತ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಸಮಾಜ ಅಥವಾ ಕುಟುಂಬ ಏನೇ ಹೇಳಿದರೂ, ಹೆಣ್ಣುಮಕ್ಕಳು ತಮ್ಮೊಳಗಿನ ಅಗಾಧವಾದ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಕೇವಲ ಪದವಿ ಮುಗಿದ ಬಳಿಕ ಮದುವೆಯಾಗಿ ಕುಟುಂಬದ ಸೇವೆಯಲ್ಲೇ ಜೀವನ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ, ಆಸಕ್ತಿ ಇರುವ ವಿಭಾಗದಲ್ಲಿ ಕುತೂಹಲಗಳ ಬೆನ್ನತ್ತಿ ಸಾಗಿ ಸಾಧನೆ ಮಾಡಬೇಕು ಎಂದರು.
ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್‌ನಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡು ವ್ಯಕ್ತಿತ್ವವನ್ನು ಸಮಗ್ರವಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಗಾಯಕ ಶ್ರೀಹರ್ಷ ಮಾತನಾಡಿ, ಶಿಕ್ಷಣ ಎಂದರೆ ಬರಿ ಜ್ಞಾನವಲ್ಲ, ಗಳಿಸಿದ ವಿದ್ಯೆಯನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೇವೆ ಎಂಬುದು ’ಬುದ್ಧಿ’ಯಾಗಿದೆ. ಕಲೆ, ಕ್ರೀಡೆಗಳು ಮನಸ್ಸು ಮತ್ತು ದೇಹವನ್ನು ಸಶಕ್ತಗೊಳಿಸುತ್ತವೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ, ಜಾನಪದ ಕಲೆ, ನಾಡು, ನುಡಿ ಹಾಗೂ ರೈತರು ಮತ್ತು ಯೋಧರನ್ನು ಸದಾ ಗೌರವಿಸಬೇಕು. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಸನ್ಮಾರ್ಗದಲ್ಲಿ ಸಾಗಿದರೆ ಧರ್ಮವೇ ನಮ್ಮನ್ನು ಕಾಯುತ್ತದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ನಿವೃತ್ತ ಕಂದಾಯ ನಿರೀಕ್ಷಕ ಎಂ.ಯೋಗೇಂದ್ರ ಮಾತನಾಡಿ, ಕ್ರೀಡೆಗಳು ಕೇವಲ ಆಟ ಅಥವಾ ಹವ್ಯಾಸಗಳಲ್ಲ. ಅವು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿವೆ ಎಂದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹದ ಕ್ಯಾಲರಿಗಳು ಕರಗಿ, ಸ್ನಾಯುಗಳು ಹಾಗೂ ಮೂಳೆಗಳು ಬಲಗೊಳ್ಳುತ್ತವೆ. ಜತೆಗೆ ನಿಯಮಿತ ವ್ಯಾಯಾಮವು ಹೃದಯವನ್ನು ಆರೋಗ್ಯವಾಗಿಡಲು ಮತ್ತು ಕಾಯಿಲೆಗಳಿಂದ ರಕ್ಷಿಸಲು ನೆರವಾಗುತ್ತದೆ ಎಂದು ಹೇಳಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಡಾ.ವಿ.ರೇಣುಕಾ ಬಾಯಿ ಮಾತನಾಡಿ, ಸಾಧನೆಗೆ ಬಡತನ, ಜಾತಿ ಅಥವಾ ಧರ್ಮಗಳು ಎಂದಿಗೂ ಅಡ್ಡಿಯಾಗುವುದಿಲ್ಲ. ವಿದ್ಯಾರ್ಥಿನಿಯರು ನಿರ್ದಿಷ್ಟ ಗುರಿ ಹೊಂದಿಸಿಕೊಂಡು, ಸತತ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಶ್ರಮಿಸಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಂಚಾಲಕ, ಐಕ್ಯೂಎಸಿ ಡಾ.ಎಸ್.ಮುತ್ತುರಾಜ, ಖಜಾಂಚಿ ಡಾ.ಎಚ್.ಆರ್.ಶಿಲ್ಪಾ, ಸಂಚಾಲಕರಾದ ಎಂ.ಎನ್.ರಜನಿ, ಪತ್ರಾಂಕಿತ ವ್ಯವಸ್ಥಾಪಕಿ ಲಲಿತಾಕುಮಾರಿ ಇತರರು ಇದ್ದರು.