ಸೇವೆ ಮೂಲಕ ಮುಕ್ತಿ ಮಾರ್ಗ ತೋರಿಸಿದ ಯತಿಗಳು: ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣನೆ

ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ಗೆ ಗೌರವ
Ascetics who showed the path to liberation through service: Dr. Sri Nirmalanandanatha Swamiji’s description
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರನ್ನು ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಗೌರವಿಸಿದರು. ಜಿ.ಟಿ.ದೇವೇಗೌಡ, ಸ್ವಾಮಿ ಯುಕ್ತೇಶಾನಂದ ಜೀ ಮಹಾರಾಜ್ , ಶ್ರೀಸೋಮೇಶ್ವರನಾಥ ಸ್ವಾಮೀಜಿ, ಡಿ.ಮಾದೇಗೌಡ, ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ಮಧು ಮಾದೇಗೌಡ, ಡಿ.ನಾಗಭೂಷಣ್ ಇತರರು ಇದ್ದರು.
Published on: 

ಮೈಸೂರು: ತ್ಯಾಗದ ಮೂಲಕವೇ ಮುಕ್ತಿ ಎಂಬುದನ್ನು ತಮ್ಮ ಸೇವೆಯ ಮೂಲಕವೇ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ತೋರಿಸಿಕೊಟ್ಟಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ಬೆಂಗಳೂರಿನ ಮಠಕ್ಕೆ ವರ್ಗಾವಣೆಗೊಂಡಿರುವ ನಗರದ ರಾಮಕೃಷ್ಣ ಆಶ್ರಮದ ನಿರ್ಗಮಿತ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರಿಗೆ ಮೈಸೂರು ನಾಗರಿಕ ಸನ್ಮಾನ ಸಮಿತಿಯಿಂದ ವಿವೇಕ ಸ್ಮಾರಕದಲ್ಲಿ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀರಾಮಕೃಷ್ಣ ಆಶ್ರಮದ ಯತಿಗಳಾಗಿ ದಶಕಗಳ ಕಾಲ ಮೈಸೂರಿನಲ್ಲಿ ನೆಲೆಸಿ ಭಕ್ತರ ಅಭಿಲಾಷೆಗಳನ್ನು ಈಡೇರಿಸಿದ ಶ್ರೇಷ್ಠ ಯತಿಗಳು. ಆಶ್ರಮದಲ್ಲಿ ತಮ್ಮ ತ್ಯಾಗದ ಮೂಲಕವೇ ಮುಕ್ತಿ ಎಂಬುದನ್ನು ತಮ್ಮ ಸೇವೆಯ ಮೂಲಕವೇ ತೋರಿಸಿಕೊಟ್ಟಿದ್ದಾರೆ. ವಿವೇಕ ಸ್ಮಾರಕ ಸೇರಿದಂತೆ ಅವರ ಇತರ ಕಾರ್ಯಗಳು ಮಾದರಿ ಎಂದರು.

ರಾಮಕೃಷ್ಣ ಆಶ್ರಮ ಯುವಕರಿಗೆ ಎಚ್ಚರಿಕೆಯ ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಅನುಸಂದಾನವನ್ನು ಮೂಡಿಸಿದ ತಾಣವಾಗಿದೆ. ಸನ್ಯಾಸಿಗಳು ಬೇರೆ ಬೇರೆ ಮಠಗಳಲ್ಲಿ ಇದ್ದರೂ ಕೋಟ್ಯಂತರ ಯುವಕರು ಆಧ್ಯಾತ್ಮಿಕ ದಾರಿಯಲ್ಲಿ ನಡೆಯಲು ಕಾರಣವಾಗಿದೆ. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಅವರನ್ನು ನೆನಪು ಮಾಡಿಕೊಂಡಾಗ ನಮ್ಮ ಮನಸ್ಸು ನಮಗೆ ಅರಿವಿಲ್ಲದೆಯೇ ಭೌತಿಕತೆಯಿಂದ ಆಧ್ಯಾತ್ಮಿಕತೆಯ ಕಡೆಗೆ ಸಾಗುತ್ತದೆ. ಅಂತಹ ಜಾಗವನ್ನು ಸುಂದರಗೊಳಿಸಿದ್ದಾರೆ. ಧ್ಯಾನಕ್ಕೆ ಮತ್ತು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಇರುವ ಜಾಗ ವಿವೇಕ ಸ್ಮಾರಕವಾಗಿದೆ ಎಂದು ಬಣ್ಣಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, 1980ರ ದಶಕದಲ್ಲಿ ಇಲ್ಲಿನ ಶ್ರೀರಾಮಕೃಷ್ಣ ಆಶ್ರಮ ಪ್ರವೇಶ ಮಾಡಿದ ಮುಕ್ತಿದಾನಂದಜೀ ಇಲ್ಲಿಯವರೆಗೂ ಸೇವಾ ಮನೋಭಾವ ನಿರಂತರವಾಗಿ ಹರಿದುಬಂದಿದೆ. ಸತತ 16 ವರ್ಷಗಳ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿ, 2011ರಿಂದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ನೆನೆದರು.

ಮುಕ್ತಿದಾನಂದಜೀ ಕೇವಲ ಆಧ್ಯಾತ್ಮಿಕ ಸಾಧಕರಲ್ಲದೆ ಸಮಾಜಮುಖಿ ಚಿಂತಕರಾಗಿದ್ದಾರೆ. ಯುವ ಪೀಳಿಯ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕಾಗಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಅವರಿಂದ ಪ್ರೇರಣೆ ದೊರಕಲಿ ಎಂದು ಕೋರಿದರು.

ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ.ಡಿ.ಮಾದೇಗೌಡ ಮಾತನಾಡಿ, ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣ ಹೋರಾಟದಲ್ಲಿ ಅನೇಕರು ಭಾಗಿಯಾಗಿದ್ದು, ಅವರೆಲ್ಲರ ಶಕ್ತಿಯಾಗಿ ಸ್ವಾಮಿ ಮುಕ್ತಿದಾನಂದ ಜೀ ಅವರು ಶ್ರಮಿಸಿದ್ದಾರೆ. ಈ ಸ್ಮಾರಕವು ವಿವೇಕ ಸ್ಮಾರಕ ಮಾತ್ರವಲ್ಲದೆ ಸ್ವಾಮಿ ಮುಕ್ತಿದಾನಂಜೀ ಅವರ ಸಾಧನೆಯ ಸ್ಮಾರಕವೂ ಆಗಿರಲಿದೆ. ಮೈಸೂರಿನಲ್ಲಿ ಅನೇಕ ಸಭಾಂಗಣ ಇದ್ದರೂ ವಿವೇಕ ಸ್ಮಾರಕದ ಸ್ಫೂರ್ತಿಯೇ ಬೇರೆ ಇದೆ ಎಂದರು.

ಸ್ವಾಮಿ ವಿವೇಕಾನಂದರು ತಂಗಿದ್ದ ಜಾಗದಲ್ಲಿ ವಿವೇಕ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎಂಬ ಇಚ್ಛೆಯು 2005ರಿಂದ ಆರಂಭವಾಗಿ 2026ರಲ್ಲಿ ಪೂರ್ಣಗೊಂಡಿತು. ಸಾಕಷ್ಟು ಅಡೆ-ತಡೆಗಳು ಎದುರಾದರೂ ಅದೆಲ್ಲವನ್ನೂ ನಿಭಾಯಿಸಿ ಸ್ಮಾರಕಕ್ಕಾಗಿ ದುಡಿದ ಕೀರ್ತಿ ಸ್ವಾಮಿ ಮುಕ್ತಿದಾನಂದಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ಇತರರು ಇದ್ದರು.