ಸಿಡಿಮದ್ದು ಅಬ್ಬರದ ಶಬ್ದಕ್ಕೆ ಅಂಜದ ಆನೆಗಳು

2ನೇ ಸುತ್ತಿನ ಫಿರಂಗಿ ತಾಲೀಮು ಗಜಪಡೆ ಹಾಗೂ ಅಶ್ವದಳಕ್ಕೆ ತರಬೇತಿ
ಸಿಡಿಮದ್ದು ಅಬ್ಬರದ ಶಬ್ದಕ್ಕೆ ಅಂಜದ ಆನೆಗಳು
ನಗರದ ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ಗಜಪಡೆಯ ಸಮ್ಮುಖದಲ್ಲಿ ನಡೆದ 2ನೇ ಸುತ್ತಿನ ಸಿಡಿಮದ್ದು ತಾಲೀಮ.Elephants undeterred by the loud noise of firecrackers.
Published on: 

ಮೈಸೂರು: ನಗರದಲ್ಲಿ ಶುಕ್ರವಾರ ನಡೆದ 2ನೇ ಸುತ್ತಿನ ಸಿಡಿಮದ್ದು ತಾಲೀಮಿನಲ್ಲಿ ಅಬ್ಬರದ ಶಬ್ದಕ್ಕೆ ಆನೆಗಳು ಅಂಜಲಿಲ್ಲ.

ನಾಡಹಬ್ಬ ಮೈಸೂರು ದಸರಾದ ವೇಳೆ ಗಜಪಡೆ ಹಾಗೂ ಅಶ್ವದಳಕ್ಕೆ ಭಾರಿ ಶಬ್ದದ ಪರಿಚಯ ಮಾಡಿಸುವ ಸಲುವಾಗಿ 2ನೇ ಹಂತದ ಸಿಡಿಮದ್ದು ತಾಲೀಮು ಶುಕ್ರವಾರ ಸಾಂಗವಾಗಿ ನಡೆಯಿತು.

ವಿಜಯದಶಮಿ ದಿನದಂದು ಅಂಬಾರಿ ಮೇಲೆ ಪ್ರತಿಷ್ಠಾಪನೆಯಾಗುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಕುಶಾಲತೋಪು ಸಿಡಿಸುವ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಭಾರಿ ಸದ್ದಿಗೆ ಗಜಪಡೆ ಹಾಗೂ ಅಶ್ವದಳ ಬೆದರದಂತೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ.

ನಗರದ ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ನಡೆದ ಫಿರಂಗಿ ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 13 ಆನೆಗಳು ಹಾಗೂ 43 ಕುದುರೆಗಳು ಪಾಲ್ಗೊಂಡಿದ್ದವು. 7 ಪಿರಂಗಿಗಳಿಂದ ಮೂರು ಸುತ್ತಿನಂತೆ 21 ಕುಶಲತೋಪು ಸಿಡಿಸಲಾಯಿತು. ಸಿಡಿಮದ್ದು ಶಬ್ದಕ್ಕೆ ಆನೆಗಳು ಮತ್ತು ಕುದುರೆಗಳು ಬೆದರಲಿಲ್ಲ.

ಮರದ ಅಂಬಾರಿ ತಾಲೀಮಿನ ವೇಳೆ ಸುಸ್ತಾಗಿದ್ದ ಮಹೇಂದ್ರ ಆನೆಯೂ ತಾಲೀಮಿನಲ್ಲಿ ಪಾಲ್ಗೊಂಡಿತ್ತು. ಸಿಡಿಮದ್ದು ತಾಲೀಮಿನಲ್ಲಿ 40 ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಭಾಗವಹಿಸಿದ್ದರು. ಸಾರ್ವಜನಿಕರು ತಾಲೀಮಿ ಅನ್ನು ಕುತೂಹಲದಿಂದ ವೀಕ್ಷಿಸಿದರು.

ಅಂಬಾರಿ ಹೊರಲು 4 ಆನೆಗಳು ಸಿದ್ಧ

ಮೈಸೂರು: ಚಿನ್ನದ ಅಂಬಾರಿ ಹೊರಲು ನಾಲ್ಕು ಆನೆಗಳು ಸಿದ್ಧವಾಗಿವೆ. ಇನ್ನೂ ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುತ್ತದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಹೇಳಿದರು.

ಕುಶಾಲತೋಪು ತಾಲೀಮು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನಂಜಯ, ಪ್ರಶಾಂತ, ಸುಗ್ರೀವಾ, ಏಕಲವ್ಯ ಆನೆಗಳು ಅಂಬಾರಿ ಸಿದ್ಧವಾಗಿವೆ ಎಂದು ತಿಳಿಸಿದರು

ಮರದ ಅಂಬಾರಿ ಹೊರುವ ತಾಲೀಮಿನ ವೇಳೆ ಸುಸ್ತಾದ ಮಹೇಂದ್ರ ಆನೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕುತ್ತಿದ್ದಾನೆ. ಆದ್ದರಿಂದ ಈ ಆನೆಯನ್ನು ಅಂಬಾರಿ ಹೊರಲು ಪರಿಗಣಿಸಿಲ್ಲ. ಈ ಹಿಂದೆಯೂ ಮಹೇಂದ್ರ ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗಿತ್ತು. ಇದಕ್ಕೆ ಈಗ ಭಾರ ಹೊರಲು ಆಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಶ್ರೀರಂಗಪಟ್ಟಣದಲ್ಲಿ ಭಾಗಿಯಾಗುವ ಆನೆಯನ್ನೂ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ದಸರಾದಲ್ಲಿ ಭಾಗವಹಿಸಿರುವ 13 ಆನೆಗಳು ಆರೋಗ್ಯವಾಗಿವೆ. 2ನೇ ಹಂತದ ಸಿಡಿಮದ್ದು ತಾಲೀಮಿಗೂ ಸಹಕರಿಸಿ ಯಶಸ್ವಿಗೊಳಿಸಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net