ಸಹೃದಯರನ್ನು ಗೆಲ್ಲುವ ಶಕ್ತಿ ಕಾವ್ಯಕ್ಕಿದೆ: ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಮತ

’ಪ್ರೇಮಕ್ಕೆ ಕಣಿ ಕೇಳಬೇಕೆ..?’ ಕವನ ಸಂಕಲನ ಬಿಡುಗಡೆ
Poetry has the power to win over the hearts of the sensitive: Writer T. Satish Javaregowda’s opinion
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ’ಪ್ರೇಮಕ್ಕೆ ಕಣಿ ಕೇಳಬೇಕೆ? ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಟಿ. ಸತೀಶ್ ಜವರೇಗೌಡ, ರವೀಂದ್ರ ಮುದ್ದಿ, ಡಾ.ಅಮ್ಮಸಂದ್ರ ಸುರೇಶ್, ಡಾ.ಡಿ.ಕೆ. ಉಷಾ, ಕಾರ್ತಿಕ್, ಹರಿಣಿ, ರವಿಕೀರ್ತಿ ಆರಾಧ್ಯ, ಶ್ವೇತಾ ರವೀಂದ್ರ ಇತರರು ಇದ್ದರು.
Published on: 

ಮೈಸೂರು: ಕತೆ, ಕಾದಂಬರಿ, ನಾಟಕ, ಲಲಿತ ಪ್ರಬಂಧದ ವಸ್ತುವನ್ನು ಸಾಂದ್ರೀಕರಿಸಿ ಅಭಿವ್ಯಕ್ತಿಸಬಹುದಾದ ಸಾಹಿತ್ಯದ ಏಕೈಕ ಪ್ರಕಾರ ಎಂದರೆ ಅದು ಕಾವ್ಯ ಮಾತ್ರ. ಇದು ಸಾಧ್ಯವಾಗಬೇಕಾದರೆ ಕವಿ ಪ್ರತಿಭೆಗೆ ಅನುಭವ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ನೈಪುಣ್ಯತೆ ಇರಬೇಕಾಗುತ್ತದೆ ಎಂದು ಸಾಹಿತಿ ಟಿ. ಸತೀಶ್‌ಜವರೇಗೌಡ ಹೇಳಿದರು.

ನಗರದ ಸಿದ್ಧಾರ್ಥ ಬಡಾವಣೆಯ ಮಲ್ಲಿಗೆ ಬುಕ್‌ಹೌಸ್‌ನಲ್ಲಿ ಸಾಹಿತಿ ರವೀಂದ್ರ ಮುದ್ದಿ ಅವರ ’ಪ್ರೇಮಕ್ಕೆ ಕಣಿ ಕೇಳಬೇಕೆ..?’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಕಾವ್ಯಕ್ಕೆ ಮೋಹಕ ಮತ್ತು ಚುಂಬಕ ಶಕ್ತಿ ಮಾತ್ರವಲ್ಲದೆ, ಸಾಗರದಷ್ಟು ಅರ್ಥವನ್ನು ಸಾಸಿವೆಯಲ್ಲಿ ತುಂಬಿ ಹೇಳುವ ’ಸೊಗಸಿನ ಶಕ್ತಿ’ಯೂ ಇದೆ. ಕವಿ ಹೃದಯದಿಂದ ಸೃಷ್ಟಿಯಾದ ಕಾವ್ಯವು ಸಹೃದಯರನ್ನು ಗೆಲ್ಲುವ ಶಕ್ತಿಯನ್ನೂ ಹೊಂದಿದೆ. ಅಷ್ಟೇ ಅಲ್ಲದೆ ಕತೆ, ಕಾದಂಬರಿಯಷ್ಟೇ ಪರಿಣಾಮಕಾರಿಯಾಗಿ ಓದುಗರ ಎದೆಯೊಳಗೆ ಇಳಿಯುವಂಥ ಗುಣವನ್ನು ಹೊಂದಿದೆ. ಕವಿ ರವೀಂದ್ರ ಮುದ್ದಿ ಅವರ ಕವಿತೆಗಳು ಸೂಜಿಗಲ್ಲಿನಂತೆ ಓದುಗರನ್ನು ಸೆಳೆದು, ಮತ್ತೆ ಮತ್ತೆ ಓದಿಸಿಕೊಳ್ಳುವಂಥ ಅಪರೂಪದ ಸ್ವೀಕಾರಾರ್ಹ ಗುಣ ಹೊಂದಿವೆ ಎಂದರು.

ಲೇಖಕ ರವೀಂದ್ರ ಮುದ್ದಿ ಮಾತನಾಡಿ, ಪ್ರೀತಿ ಹೃದಯದಲ್ಲಿ ಹುಟ್ಟುತ್ತದೆ. ಅದಕ್ಕೆ ಅಂತ್ಯವಿಲ್ಲ. ಜತೆಗೆ ಕಣಿ ಕೇಳುವ ಜರೂರತ್ತೂ ಇಲ್ಲ. ಕಥೆ ಮತ್ತು ಕಾದಂಬರಿ ಬರೆಯುತ್ತಿದ್ದ ನಾನು, ಮೊದಲಿಗೆ ಅಳುಕಿನಿಂದಲೆ ಕವಿತೆಗಳನ್ನು ಬರೆದು ಓದುಗರ ಮಡಿಲಿಗೆ ಹಾಕಿದ್ದೇನೆ. ಈಗ ಕವಿತೆಗಳನ್ನು ಓದಿದವರ ಮುಖದಲ್ಲಿ ತೃಪ್ತಿ ಕಂಡು ಒಂದು ಸಣ್ಣ ಮಟ್ಟಿಗಿನ ಸಾರ್ಥಕ ಭಾವ ಮೂಡಿದೆ ಎಂದರು.

ವ್ಯಕ್ತಿಯಲ್ಲಿ ಸೂಕ್ಷ್ಮ ಸಂವೇದನೆ ಇದ್ದಾಗ ಕವಿ-ಕಾವ್ಯ ಹುಟ್ಟುತ್ತದೆ. ಪ್ರೇಮದ ಭಾವವನ್ನು ಅನುಭವಿಸಿಯೇ ಬರೆಯಬೇಕೆಂದೇನಿಲ್ಲ. ಗ್ರಹಿಸಿಯೂ ಬರೆಯಬಹುದು. ಓದುಗರ ಸ್ಪಂದನೆ ನನ್ನ ಮುಂದಿನ ಬರವಣಿಗೆಗೆ ಮತ್ತಷ್ಟು ಚೈತನ್ಯ ನೀಡಿದೆ. ಕನ್ನಡ ಸಾಹಿತ್ಯದಲ್ಲಿ ಕವಿತೆ, ಕಥೆ ಹಾಗೂ ಕಾದಂಬರಿ ಪ್ರಕಾರವು ಜತೆ ಜತೆಗೆ ಸಾಗುವಂತಾಗಬೇಕು ಎಂದರು.

ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಡಿ.ಕೆ.ಉಷಾ, ನಿವೃತ್ತ ಇಂಜಿನಿಯರ್ ರವಿಕೀರ್ತಿ ಆರಾಧ್ಯ ಕವನ ಸಂಕಲನದ ಬಗ್ಗೆ ಮಾತನಾಡಿದರು. ಮಲ್ಲಿಗೆ ಬುಕ್‌ಹೌಸ್‌ನ ರೂವಾರಿಗಳಾದ ಕಾರ್ತಿಕ್ ಹಾಗೂ ಹರಿಣಿ ದಂಪತಿ ಓದುಗರು ಕವಿತೆಗಳನ್ನು ವಾಚಿಸುವ ಸಂಭ್ರಮಕ್ಕೂ ಈ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದರು.