ಸಮುದಾಯದ ಬೇಡಿಕೆಗಳಿಗೆ ಒಗ್ಗಟ್ಟಾಗಿ ಧ್ವನಿ ಎತ್ತಿ

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆ
 ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ
ಸರಗೂರು ತಾಲೂಕು ಆಗತ್ತೂರು ಗ್ರಾಮದಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಗಣ್ಯರು ಅನಾವರಣಗೊಳಿಸಿದರು. ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಅನಿಲ್ ಚಿಕ್ಕಿಮಾದು , ದರ್ಶನ್ ಧ್ರುವನಾರಾಯಣ, ಗಣೇಶ್ ಪ್ರಸಾದ್, ಅಪ್ಪಣ್ಣ, ಜಯಪ್ರಕಾಶ್, ನಿಂಗರಾಜು ಇದ್ದರು.
Published on: 

ಸರಗೂರು: ಸಮುದಾಯದ ಮೂಲಭೂತ ಹಕ್ಕು, ನ್ಯಾಯಯುತ ಬೇಡಿಕೆಗಳಿಗಾಗಿ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕಾಗಿದೆ ಎಂದು ದಾವಣಗೆರೆಯ ರಾಜನಹಳ್ಳಿಮಠದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆಗತ್ತೂರು ಗ್ರಾಮದಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ನಮ್ಮ ಹಕ್ಕುಗಳು, ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸಬೇಕಾಗಿದೆ. ಇಂದು ಬಾಬಾ ಸಾಹೇಬ್ ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಸೇರಿದಂತೆ ಹಲವು ಮಹನೀಯರನ್ನು ಸ್ಮರಿಸಬೇಕಿದೆ. ಅವರ ಆಶಯಗಳನ್ನು ಮುಂದುವರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದರು.

ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಮುದಾಯಕ್ಕೆ ಹಲವು ಸವಾಲುಗಳು ಎದುರಾಗಿವೆ. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಆಶಯಗಳ ಫಲವಾಗಿ ಎಸ್ಸಿ, ಎಸ್ಟಿಗಳಿಗೆ ರಾಜಕೀಯ ಮೀಸಲಾತಿ ಸೇರಿದಂತೆ ಹಲವು ಹಕ್ಕುಗಳು ದೊರೆತಿವೆ. ಸರ್ಕಾರಗಳು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆ ಹಣವು ಶಿಕ್ಷಣ, ಉದ್ಯೋಗ, ಮನೆ, ರಸ್ತೆ, ಕುಡಿಯುವ ನೀರು, ಆರೋಗ್ಯ, ಮೂಲಸೌಕರ್ಯ ಹಾಗೂ ಆರ್ಥಿಕ ಸ್ವಾವಲಂಬನೆಗೆ ತಲುಪಬೇಕಾಗಿದೆ ಎಂದರು.

ನಮ್ಮ ಹಕ್ಕುಗಳಿಗಾಗಿ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸೋಣ. ಅಗತ್ಯವಿದ್ದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸೋಣ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ರಾಜ್ಯ ಮಟ್ಟದಲ್ಲೂ ಸಂಘಟಿತ ಹೋರಾಟ ರೂಪಿಸೋಣ. ಹಿಂದಿನ ಸರ್ಕಾರಗಳು ನಮ್ಮ ಸಮುದಾಯದ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿವೆ. ಆದರೆ, ಇಂದು ನ್ಯಾಯಾಲಯದ ತೀರ್ಪುಗಳು, ನೀತಿ ಬದಲಾವಣೆಗಳು ಅಥವಾ ಆಡಳಿತಾತ್ಮಕ ನಿರ್ಧಾರಗಳಿಂದ ಸಮುದಾಯಕ್ಕೆ ಹಿನ್ನಡೆಯಾಗಿದೆ. ಅದನ್ನು ರಾಜಕೀಯ ದೃಷ್ಟಿಯಿಂದ ನೋಡುವುದಕ್ಕಿಂತ ನಮ್ಮ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಒಗ್ಗಟ್ಟಾಗಿ ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆಗತ್ತೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಪುತ್ಥಳಿಗೆ ನಿತ್ಯ ಪೂಜೆ ಸಲ್ಲಿಸಬೇಕು. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲು ವಾಲ್ಮೀಕಿ ಅವರೇ ಕಾರಣ. ಆಗತ್ತೂರು ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ, ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸಮುದಾಯ ಭವನ ಪೂರ್ಣಗೊಳ್ಳಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಶಾಸಕರಾದ ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಅರಣ್ಯ ಮತ್ತು ವಸತಿ ವಿಹಾರಧಾಮಗಳ ಮಾಜಿ ಅಧ್ಯಕ್ಷ ಅಪ್ಪಣ್ಣ, ಬೀಚನಹಳ್ಳಿ ಜಯಪ್ರಕಾಶ್, ಉದ್ಯಮಿ ನಿಂಗರಾಜು ಎನ್.ಬೆಳ್ತೂರು, ನಾಯಕ ಸಮಾಜದ ಅಧ್ಯಕ್ಷ ರಾಮಚಂದ್ರ, ಕೆಂಪನಾಯಕ, ಎಂ.ಸಿ.ದೊಡ್ಡನಾಯಕ, ಬಸವನಾಯಕ, ಶಂಭುಲಿಂಗನಾಯಕ, ವಕೀಲ ಲೋಕೇಶ್, ಮೈಮುಲ್ ಮಾಜಿ ಅಧ್ಯಕ್ಷ ಕೆ.ಈರೇಗೌಡ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಅನಿಲ್ ಚಿಕ್ಕಮಾದು ಅಭಿಮಾನಿ ಬಳಗದ ಗೌರವಾಧ್ಯಕ್ಷ ಅಂಕನಾಯಕ, ಗೌರವ ಸಲಹೆಗಾರ ಜವರನಾಯಕ, ಅಧ್ಯಕ್ಷ ಪುಟ್ಟನಾಯಕ, ಪದಾಧಿಕಾರಿಗಳಾದ ವಿ.ಪ್ರಕಾಶ್, ನಾರಾಯಣ್, ಆರ್. ಸಿದ್ದರಾಜನಾಯಕ, ಗೋವಿಂದನಾಯಕ ಹಾಜರಿದ್ದರು.

ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯಕ್, ಪ್ರಾಂಶುಪಾಲ ಪ್ರೊ.ನಂಜುಂಡಸ್ವಾಮಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ಕಪಿಲಾ ನದಿಯಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ವಾದ್ಯಗೋಷ್ಠಿಗಳು, ನೀಲಕಂಠ ತಂಡದಿಂದ ವೀರಗಾಸೆ ನೃತ್ಯ ಪ್ರದರ್ಶನದೊಂದಿಗೆ ವೇದಿಕೆವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net