ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭ ಶೀಘ್ರ ನಿರ್ಧಾರ

ಶಾಸಕ ಡಿ.ರವಿಶಂಕರ್ ಮಾಹಿತಿ, ಸಿಎಂ ಜತೆಗೆ ಚರ್ಚೆ
ಕುಪ್ಪೆ ಮತ್ತು ಅಳೆಯೂರು ಗ್ರಾಮ ಪಂಚಾಯಿತಿ
ಚಿಕ್ಕಕೊಪ್ಪಲು ಗ್ರಾಮದಲ್ಲಿ ಶಾಸಕ ಡಿ.ರವಿಶಂಕರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಮಹದೇವಸ್ವಾಮಿ, ಉದಯ್ ಶಂಕರ್ ಇತರರಿದ್ದರು.
Published on: 

ಸಾಲಿಗ್ರಾಮ: ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಕುಪ್ಪೆ ಮತ್ತು ಅಳೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು 3.50 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಶ್ರೀರಾಮ ಸಕ್ಕರೆ ಕಾರ್ಖಾನೆ ಮೂರ‌್ನಾಲ್ಕು ತಾಲೂಕಿನ ರೈತರ ಜೀವನಾಡಿಯಾಗಿದೆ. ಇದನ್ನು ಪ್ರಾರಂಭ ಮಾಡುವುದು ಸರ್ಕಾರದ ಜವಾಬ್ದಾರಿ. ಶೀಘ್ರದಲ್ಲೇ ಪ್ರಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗುತ್ತಿಗೆದಾರ ಮುರುಗೇಶ್ ನಿರಾಣಿ ಅವರಿಗೆ ಕಾರ್ಖಾನೆ ಪ್ರಾರಂಭ ಮಾಡಿ, ಇಲ್ಲವಾದರೆ ಬಿಡಿ. ಸಹಕಾರ ಇಲಾಖೆಯಿಂದಲೇ ನಡೆಸಲು ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಲಾಗಿದೆ ಎಂದರು.

ಸಾಲಿಗ್ರಾಮ ತಾಲೂಕು ಆಸ್ಪತ್ರೆಗೆ 100 ಬೆಡ್, ಕೆ.ಆರ್.ನಗರ ತಾಲೂಕು ಆಸ್ಪತ್ರೆಗೆ 150 ಬೆಡ್ ಸೌಲಭ್ಯ ಕಲ್ಪಿಸಲು ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ. ಅದೇ ರೀತಿ ಚಿಕ್ಕ ಕೊಪ್ಪಲು, ಅಳೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ನೀರಾವರಿ ಸಚಿವ ಚಲುವರಾಯ ಸ್ವಾಮಿ ಅವರೊಂದಿಗೆ ಈಗಾಗಲೇ ತಾಲೂಕಿನ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ಪ್ರಾರಂಭದಿಂದ ಕೊನೆಯ ಹಂತದವರೆಗೆ ಇರುವ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಮನವಿ ಮಾಡಿದ್ದೇವೆ. ಹೊಸೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ 60 ಲಕ್ಷ ರೂ., ದಿಡಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಎರಡು ಹಂತದಲ್ಲಿ ಸುಮಾರು 1.50. ಕೋಟಿ ರೂ.ಅನುದಾನ ನೀಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಸಾಲೆಕೊಪ್ಪ ಕೊಪ್ಪಲು ಗ್ರಾಮದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಕನ್ನಂಬಾಡಿ ಅಮ್ಮ ದೇವಸ್ಥಾನಕ್ಕೆ ಈಗಾಗಲೇ 10 ಲಕ್ಷ ರೂ.ಅನುದಾನ ನೀಡಿದ್ದು ಎರಡನೇ ಹಂತದಲ್ಲೂ ಅನುದಾನ ನೀಡುತ್ತೇನೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಕಾಂಗ್ರೆಸ್ ವಕ್ತಾರ ಜಾಬಿರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಸಾಲೆಕೊಪ್ಪಲು ನೂತನ್, ಚುಂಚನಕಟ್ಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಗೌಡ, ತಾಪಂ ಮಾಜಿ ಸದಸ್ಯ ಪ್ರಭಾಕರ್, ವಕೀಲ ಪಣಿತ್, ಎಚ್.ಕೆ.ರಮೇಶ್, ನಿತಿನ್, ಜಯಂತ್, ಜಗದೀಶ್, ಬಸವರಾಜು, ಸಂತೋಷ್, ಗಿರೀಶ್, ಕ್ಷೇತ್ರಪಾಲ, ತಮ್ಮೇಗೌಡ, ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net