ಶಿಸ್ತಿನ ಜೀವನದಿಂದ ಗುರಿ ಮುಟ್ಟಲು ಸಾಧ್ಯ

ಲೆಕ್ಕ ಪರಿಶೋಧನೆ ತಜ್ಞ ಜಿ.ವಿ.ರಾಜೀವ್ ಅಭಿಪ್ರಾಯ
ಸರಗೂರು ತಾಲೂಕಿನ ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಸಾಧನೆಯ ಹಂಬಲ ಮೂಡಿಸುವ ಉದ್ದೇಶದಿಂದ ವಿಶೇಷ ವೃತ್ತಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಜಿ.ವಿ.ರಾಜೀವ್, ಪ್ರಭಾಕರ್, ಸಲಹೆಗಾರರಾದ ನಾಗಣ್ಣ ಹಾಗೂ ಕೆಂಡಗಣ್ಣಸ್ವಾಮಿ, ಪ್ರಾಂಶುಪಾಲ ಪ್ರಕಾಶ್, ಶಿಕ್ಷಕರು ಇತರರು ಇದ್ದರು.
ಸರಗೂರು ತಾಲೂಕಿನ ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಸಾಧನೆಯ ಹಂಬಲ ಮೂಡಿಸುವ ಉದ್ದೇಶದಿಂದ ವಿಶೇಷ ವೃತ್ತಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಜಿ.ವಿ.ರಾಜೀವ್, ಪ್ರಭಾಕರ್, ಸಲಹೆಗಾರರಾದ ನಾಗಣ್ಣ ಹಾಗೂ ಕೆಂಡಗಣ್ಣಸ್ವಾಮಿ, ಪ್ರಾಂಶುಪಾಲ ಪ್ರಕಾಶ್, ಶಿಕ್ಷಕರು ಇತರರು ಇದ್ದರು.
Published on: 

ಸರಗೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಆಸಕ್ತಿ, ಸಾಮರ್ಥ್ಯ ಹಾಗೂ ಗುರಿಗೆ ಅನುಗುಣವಾಗಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಲೆಕ್ಕ ಪರಿಶೋಧನೆ ತಜ್ಞ ಜಿ.ವಿ.ರಾಜೀವ್ ತಿಳಿಸಿದರು.

ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ವೃತ್ತಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಸಾಧನೆಯ ಹಂಬಲ ಮೂಡಿಸುವ ಉದ್ದೇಶದಿಂದ ವಿಶೇಷ ವೃತ್ತಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೃತ್ತಿಜೀವನದ ಅನುಭವಗಳು, ಸಾಧನೆಯ ಹಾದಿಯಲ್ಲಿ ಎದುರಿಸಿದ ಸವಾಲುಗಳು, ಪರಿಶ್ರಮ, ಶಿಸ್ತು ಹಾಗೂ ಸಮಯದ ಸದುಪಯೋಗದ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಹಣಕಾಸಿನ ಅರಿವು ಬೆಳೆಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಮತ್ತು ಆಸಕ್ತಿ ಅಗತ್ಯ. ಕಷ್ಟಪಟ್ಟು ಓದಿದರೆ ಸಿಎಯಂತಹ ಉನ್ನತ ವೃತ್ತಿಪರ ಹುದ್ದೆಗಳನ್ನು ತಲುಪಲು ಸಾಧ್ಯ. ಜೀವನದಲ್ಲಿ ಸೋಲು ಎದುರಾದಾಗ ಎದೆಗುಂದದೆ ಅದನ್ನೇ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿನಯ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದುವುದು ಅಗತ್ಯ ಎಂದರು. ಕಂಪ್ಯೂಟರ್ ಕಲಿಕೆ ಕೇವಲ ಇಂಟರ್‌ನೆಟ್‌ಗೆ ಸೀಮಿತವಾಗವಾರದು. ಕಂಪ್ಯೂಟರ್ ಕಾರ್ಯವಿಧಾನ, ತಂತ್ರಜ್ಞಾನದ ಸರಿಯಾದ ಬಳಕೆ, ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಕಲಿಕೆ ಎಂದು ವಿವರಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು, ನಾಯಕತ್ವದ ಗುಣಗಳು, ತಂಡದೊಂದಿಗೆ ಕೆಲಸ ಮಾಡುವ ಕೌಶಲ ಹಾಗೂ ವೃತ್ತಿಜೀವನದಲ್ಲಿ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ವಿದ್ಯಾರ್ಥಿಗಳ ಕುತೂಹಲಕ್ಕೆ ತಜ್ಞರಿಂದ ಉತ್ತರ:

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ವಿದ್ಯಾರ್ಥಿಗಳ ಸಂವಾದದಲ್ಲಿ ಅನೇಕ ವಿದ್ಯಾರ್ಥಿಗಳು ಭವಿಷ್ಯದ ಕನಸುಗಳು ಹಾಗೂ ವೃತ್ತಿ ಆಯ್ಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

10ನೇ ತರಗತಿಯ ನಂತರ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಸಿಎ ಆಗಲು ಯಾವ ರೀತಿಯ ವಿದ್ಯಾಭ್ಯಾಸ ಮಾಡಬೇಕು? ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಯಾವ ಕೌಶಲಗಳನ್ನು ಕಲಿಯಬೇಕು? ಪರೀಕ್ಷೆಯ ಭಯ ಹೇಗೆ ನಿವಾರಿಸಿಕೊಳ್ಳಬೇಕು? ಎಂಬ ಹಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟರು.

ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗೂ ಗಣ್ಯರು ಸರಳವಾಗಿ ಹಾಗೂ ಉದಾಹರಣೆಗಳ ಮೂಲಕ ಉತ್ತರಿಸಿ, ಜೀವನದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರಭಾಕರ್, ಸಲಹೆಗಾರರಾದ ನಾಗಣ್ಣ ಹಾಗೂ ಕೆಂಡಗಣ್ಣಸ್ವಾಮಿ, ಪ್ರಾಂಶುಪಾಲ ಪ್ರಕಾಶ್, ಶಿಕ್ಷಕರು ಇತರರು ಇದ್ದರು.