ವೋಟ್ ಗಿಟ್ಟದ್ದಕ್ಕೆ ಚೋರಿ ಆರೋಪ: ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಸುದ್ದಿಗೋಷ್ಠಿ
Accusation of theft over failure to secure votes: Legislative Council Leader of the Opposition Chalavadi Narayanaswamy lashes out at the Congress.
ಛಲವಾದಿ ನಾರಾಯಣಸ್ವಾಮಿ
Published on: 

ಮೈಸೂರು: ಚೋರ್‌ಗಳಿಗೆ ಜನರು ವೋಟ್ ಹಾಕುತ್ತಿಲ್ಲ, ಹಾಗಾಗಿ ಕಾಂಗ್ರೆಸ್ ದೇಶದಲ್ಲಿ ವೋಟ್ ಚೋರಿ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಇಷ್ಟು ದಿನಗಳು ಜನರು ಚೋರ್‌ಗಳಿಗೆ ವೋಟ್ ನೀಡುತ್ತಿದ್ದರು. ಆದರೆ ಸತ್ಯದ ಅರಿವಾದ ಮೇಲೆ ಜನರು ಚೋರ್‌ಗಳಿಗೆ ವೋಟ್ ಹಾಕುವುದನ್ನು ನಿಲ್ಲಿಸಿದರು. ಇದನ್ನು ಸಹಿಸದ ಕಾಂಗ್ರೆಸ್‌ನ ರಾಹುಲ್‌ಗಾಂಧಿ, ದೇಶದಲ್ಲಿ ವೋಟ್ ಚೋರ್ ಆಗುತ್ತಿದೆ ಎಂದು ಎಲ್ಲೆಡೆ ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ದೇಶ ಆರ್ಥಿಕವಾಗಿ ಸದೃಢವಾಗಿದ್ದು, ಅಭಿವೃದ್ಧಿ ಬಹಳ ವೇಗವಾಗಿ ಸಾಗುತ್ತಿದೆ. ಇದರಿಂದ ಜನರು ಬಹಳ ಸಂತುಷ್ಟರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ರಾಹುಲ್ಗಾಂಧಿಗೆ ದೇಶದಲ್ಲಿ ಯಾವುದೇ ಭ್ರಷ್ಟಾಚಾರ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ಏನಾದರೂ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ ಎಂದರು.

ಎಸ್‌ಐಆರ್ ಟೀಕಿಸುವ ಕಾಂಗ್ರೆಸ್ ಅವಧಿಯಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗಿತ್ತು. ಆದರೆ ಆಗ ಯಾರೂ ಚಕಾರ ಎತ್ತಿರಲಿಲ್ಲ. ಚೋರ್‌ವೋಟ್‌ಗಾಗಿ ಹೊರಗಿನವರನ್ನು ಮತದಾರರನ್ನಾಗಿ ಕಾಂಗ್ರೆಸ್ ಮಾಡಿತ್ತು ಎಂದು ಆರೋಪಿಸಿದರು.

ಈಗ ಪರಿಷ್ಕರಣೆ ಬಳಿಕ ಹೊರಗಿನವರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾದವರು ಪಟ್ಟಿಯಲ್ಲಿ ಇದ್ದರೆ ಅವರು ಕಾಂಗ್ರೆಸ್ ಮತದಾರರು ಎಂದು ಪಟ್ಟಿ ಪರಿಷ್ಕರಣೆಯಿಂದ ಬಿಡಬೇಕೆ? ಅಂತಹವರನ್ನು ಪಟ್ಟಿಯಿಂದ ತೆಗೆಯಲು ಯಾರಿಗೂ ಹೇಳಬೇಕಿಲ್ಲ ಎಂದರು.

ಕರ್ನಾಟಕದಲ್ಲಿ ಈಗ ಎಸ್‌ಐಆರ್ ಬಂದಿದೆ. ವೋಟ್ ಚೋರಿ ಎನ್ನುವ ಕಾಂಗ್ರೆಸ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಾಗ ಯಾಕೆ ವೋಟ್ ಚೋರಿ ಎನ್ನಲಿಲ್ಲ. ತೆಲಂಗಾಣ, ಕೇರಳಂನಲ್ಲಿ ಹಾಗೂ ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದಾಗ ವೋಟ್ ಚೋರಿ ಪ್ರಶ್ನಿಸಿಲ್ಲ ಎಂದು ಹೇಳಿದರು.

ಸಿಜೆಪಿ ಯಾವುದೇ ರೀತಿ ನೋಂದಣಿ ಮಾಡಿಕೊಂಡಿಲ್ಲ. ಪ್ರಧಾನ ಮಂತ್ರಿ ಆಗಬೇಕೆಂದು ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ನಿಜವಾಗಿ ನೆಹರು, ಮಹಾತ್ಮಗಾಂಧಿ, ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಅವರನ್ನು ಫಾಲೋ ಮಾಡಬೇಕಿತ್ತು. ಆದರೆ ಯಾವ ನೋಂದಣಿಯನ್ನೇ ಮಾಡದ ಸಿಜೆಪಿಯ ಅಭಿಜೀತ್ ದೀಪ್ಕೆ ಅವರ ಫಾಲೋವರ್ ಆಗಿದ್ದಾರೆ. ಇದು ಅವರ ಭೌದ್ಧಿಕ ಮಟ್ಟವನ್ನು ತೋರುತ್ತದೆ ಎಂದು ಟೀಕಿಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವೆಲ್ ಅವರು ದೇಶದ ರಕ್ಷಣೆಯಲ್ಲಿ ದುರಂಧರ್ ಆಗಿದ್ದಾರೆ. ಅವರಿಂದಾಗಿ ಯಾವ ದೇಶವೂ ಭಾರತವನ್ನು ದಿಟ್ಟಿಸಿ ನೋಡುವ ಪರಿಸ್ಥಿತಿಯಲ್ಲಿಲ್ಲ. ಆ ಮಟ್ಟಕ್ಕೆ ದೇಶದ ರಕ್ಷಣೆಯನ್ನು ಮಾಡಿದ ಧೀಮಂತ. ಪಾಕಿಸ್ತಾನಕ್ಕೆ ನುಗ್ಗಿ ಭಾರತ ಹೊಡೆದು ಬರುತ್ತದೆ ಎಂದರೆ ಅದಕ್ಕೆ ಕಾರಣ ಅಜಿತ್ ದೋವೆಲ್ ಸಮರ್ಥ ಸಲಹೆ ಕಾರಣ. ಅವರಿಲ್ಲದಿದ್ದರೆ ಮೋದಿ ಸರ್ಕಾರದ ವಿರುದ್ಧವಾಗಿ ಕಾಂಗ್ರೆಸ್ ಗದಾ ಪ್ರಹಾರ ಮಾಡುತ್ತಿತ್ತು. ದೋವೆಲ್ ಇದಕ್ಕೆ ಅಡ್ಡ ಇದ್ದಾರೆ, ಹೀಗಾಗಿ ಕಾಂಗ್ರೆಸ್ ಅವರನ್ನು ಟಾರ್ಗೆಟ್ ಮಾಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ದಲಿತರ ಮೇಲೆ ಅತ್ಯಾಚಾರ, ಕೊಲೆ ಆಗುತ್ತಿದೆ. ಪೊಲೀಸರ ವರ್ಗಾವಣೆಯಲ್ಲಿಯೂ ದೊಡ್ಡ ದಂಧೆ ನಡೆಯುತ್ತಿದ್ದರೂ ಗೃಹಮಂತ್ರಿ ಯಾವುದೇ ಪ್ರತಿಕ್ರಿಯೆ ನಿಡುತ್ತಿಲ್ಲ. ಹೀಗಾಗಿ ರಾಜ್ಯದ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಎಂಎಲ್‌ಸಿ ರಘು ಕೌಟಿಲ್ಯ, ಮುಖಂಡರಾದ ಎಸ್.ಮಹದೇವಯ್ಯ ಅನಿಲ್ ಥಾಮಸ್, ಶೈಲೇಂದ್ರ, ರುದ್ರಮೂರ್ತಿ, ಅಶೋಕ್, ವಿನಯ್ ಕುಮಾರ್, ಅನಿಲ್ ಕುಮಾರ್, ಕಾರ್ತಿಕ್, ಮರಿಯಪ್ಪ, ಅರ್ಜುನ್ ಪಾರ್ಥ, ಪರಶುರಾಮ್, ವಸಂತ ಕುಮಾರ್, ಪರಮಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net