ವಿದ್ಯುತ್ ಸಾಮಗ್ರಿ ಖರೀದಿಯಲ್ಲಿ ನಿಯಮ ಉಲ್ಲಂಘನೆ

* ಸೆಸ್ಕ್ ಎಂಡಿ ವಿರುದ್ಧ ಸರ್ಕಾರಕ್ಕೆ ನಿಗಮದ ಅಧ್ಯಕ್ಷರ ದೂರು
ವಿದ್ಯುತ್ ತಂತಿ
ವಿದ್ಯುತ್ ತಂತಿ
Published on: 

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ಖರೀದಿ ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಸ್ಮಾರ್ಟ್ ಮೀಟರ್ ಖರೀದಿ, ವಿದ್ಯುತ್ ಸಾಮಗ್ರಿಗಳ ದಾಸ್ತಾನು ಮತ್ತು ಬಜೆಟ್ ಹಂಚಿಕೆಯಲ್ಲಿ ಅವ್ಯವಸ್ಥೆ ನಡೆದಿದೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಅಗತ್ಯವಿರುವ ಸ್ಮಾರ್ಟ್ ಮೀಟರ್‌ಗಳನ್ನು 3,540 ರೂ.ಗೆ ಪೂರೈಸಲು ಖಾಸಗಿ ಸಂಸ್ಥೆ ಮುಂದೆ ಬಂದಿದ್ದರೂ, ಮಂಡಳಿಯ ಅನುಮತಿ ಅಥವಾ ಹೊಸ ಟೆಂಡರ್ ಇಲ್ಲದೆ ಮತ್ತೊಂದು ಖಾಸಗಿ ಸಂಸ್ಥೆಯಿಂದ ಹೆಚ್ಚಿನ ಬೆಲೆಗೆ ಖರೀದಿಸಲು ಆದೇಶಿಸಲಾಗಿದೆ. ಈ ವ್ಯವಹಾರ 30 ರಿಂದ 35 ಕೋಟಿ ರೂ. ಮೊತ್ತದ್ದಾಗಿದ್ದು, ನಿಯಮಾನುಸಾರ ಖರೀದಿಸಿದ್ದರೆ 10 ರಿಂದ 15 ಕೋಟಿ ರೂ. ಉಳಿತಾಯವಾಗುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಅದೇ ಸಂಸ್ಥೆಯಿಂದ 2,000 ಮೀಟರ್‌ಗಳನ್ನು ಒಂದು ಕೋಟಿ ರೂ.ಗೆ ಖರೀದಿಸಲು ಮಂಡಳಿಯ ಅನುಮತಿ ಪಡೆಯದೆ ಆದೇಶ ನೀಡಲಾಗಿದೆ. ಇದರಿಂದ ನಿಗಮಕ್ಕೆ ಸುಮಾರು 30 ಲಕ್ಷ ರೂ. ನಷ್ಟವಾಗಿದೆ. ನಿಗಮದಲ್ಲಿ ತಂತಿ, ವಿದ್ಯುತ್ ಕಂಬ ಹಾಗೂ ಪರಿವರ್ತಕಗಳ ದಾಸ್ತಾನು ಕೊರತೆಯಿದ್ದರೂ, ಕಂಬ ಮತ್ತು ತಂತಿ ಖರೀದಿ ಪ್ರಕ್ರಿಯೆಗಳನ್ನು ಕೊನೆಯ ಹಂತದಲ್ಲಿ ರದ್ದುಪಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಎಲ್ಲ ಪ್ರಕರಣಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನೂ ಪರಿಶೀಲಿಸಿ, ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.