ಮೈಸೂರು:ಕರ್ತವ್ಯ ನಿರ್ವಹಿಸಿದರೆ ಹಣ, ಅಧಿಕಾರ ಹಾಗೂ ಸಮಾಜದಲ್ಲಿ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸಭೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದಾಗಿ ದೇಶದಲ್ಲಿ ಎಲ್ಲರೂ ಒಟ್ಟಿಗೆ ಜೀವಿಸುತ್ತಿದ್ದೇವೆ. ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನ ಇರುವ ದೇಶದಲ್ಲಿ ಹಕ್ಕುಗಳನ್ನು ಚಲಾಯಿಸುವ ಮುನ್ನ ಪ್ರತಿಯೊಬ್ಬರೂ ಕರ್ತವ್ಯ ಪಾಲಿಸಬೇಕು ಎಂದರು.
ಎಲ್ಲರೂ ದೇಶದಿಂದ ನಮಗೆ ಏನು ಲಾಭವಾಗಿದೆ ಎಂದು ಹೇಳುತ್ತಾರೆ. ಹಾಗೇ ಕೇಳುವ ಮುನ್ನ ನಾವೆಷ್ಟು ಕರ್ತವ್ಯ ನಿಭಾಯಿಸಿದ್ದೇವೆ ಎನ್ನುವುದನ್ನು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ಕರ್ತವ್ಯವನ್ನು ನಿಭಾಯಿಸಿದರೆ ಹಣ, ಅಧಿಕಾರ, ಗೌರವ ಎಲ್ಲ ದೊರೆಯುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹಕ್ಕುಗಳ ಜತೆಗೆ ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಇತ್ತೀಚಿನ ಕಾಲಘಟ್ಟದಲ್ಲಿ ಕೇವಲ ನಾಟಕೀಯವಾಗಿರದೆ, ಪ್ರಜಾಪ್ರಭುತ್ವ ರಾಷ್ಟ್ರವನ್ನು ಉಳಿಸಲು ಎಲ್ಲರೂ ದೃಢಸಂಕಲ್ಪ ಮಾಡಬೇಕು ಎಂದರು.
ಇವತ್ತಿನ ರಾಜಕಾರಣ, ಹೋರಾಟ ಹಾಗೂ ಕಾನೂನುಗಳು ಭಾರತ ಸಂವಿಧಾನಕ್ಕೆ ಪೂರಕವಾಗಿಲ್ಲ ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ. ಹಾಗಾಗಿ ನಮ್ಮ ದೇಶದ ಕಾನೂನು ತಿಳಿದುಕೊಂಡು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದನ್ನು ವಿದ್ಯಾರ್ಥಿ ದಿಶೆಯಿಂದಲೇ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇಶದ ಬಹುಸಂಖ್ಯಾತ ಜನರಿಗೆ ಮತ್ತು ಬಡವರಿಗೆ ಸೂಕ್ತ ಆಡಳಿತ ಹಾಗೂ ಪರಿಹಾರ ಸಿಗಬೇಕಾದರೆ, ಯುವಕರು, ರಾಜಕಾರಣ ಹಾಗೂ ಕಾನೂನಿನ ಉನ್ನತ ಸ್ಥಾನಗಳನ್ನು ಗಳಿಸಿಕೊಳ್ಳಬೇಕು ಎಂದರು.
ಇದು ಕೇವಲ ಮೂರು ದಿನಗಳ ತರಬೇತಿ ಅಥವಾ ಒಂದು ದಿನದ ಚರ್ಚಾ ಕಾರ್ಯಕ್ರಮವಾಗಬಾರದು, ಬದಲಾಗಿ ಇದರಿಂದ ಎಲ್ಲರೂ ಸ್ಪೂರ್ತಿ ಪಡೆದು ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಮೈಸೂರು ವಕೀಲರ ಸಂಘದ ಅಧ್ಯಕ್ಷರು ಎಸ್. ಲೋಕೇಶ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ಎಂ.ಪಿ.ನಾಗಮ್ಮ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಡಿ ಉದಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಎಚ್.ಎಸ್.ಬಿಂದ್ಯಾ, ಸಾಮಾಜಿಕ ಹೋರಾಟಗಾರರಾದ ಅಹಿಂದ ಜವರಪ್ಪ, ಸೋಮಯ್ಯ ಮಲೆಯೂರು ಇತರರು ಇದ್ದರು.