

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ತಂದ್ರೆಗುಡಿಕೊಪ್ಪಲು ಗ್ರಾಮದ ಗ್ರಾಮದೇವತೆ ಶ್ರೀ ತಂದ್ರೆಯಮ್ಮ (ಸಿಡಿಯಮ್ಮ) ಉತ್ಸವ ಬುಧವಾರ ಭಕ್ತಿಭಾವದಿಂದ ನೆರವೇರಿತು.
ದೀಪಾವಳಿ ಹಬ್ಬದ ಮರುದಿನ ಪ್ರತಿ ವರ್ಷದಂತೆ ಈ ಬಾರಿಯೂ ತಂದ್ರೆಗುಡಿ ಹಾಗೂ ಅತ್ತಿಗೋಡು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರದಲ್ಲಿ ಉತ್ಸವ ಹಾಗೂ ಜಾತ್ರೆ ಆಯೋಜಿಸಿದ್ದರು. ಬೆಳಗ್ಗೆ ಅತ್ತಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿರುವ ಶ್ರೀ ತಂದ್ರೆಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಂಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಉತ್ಸವ ಮೂರ್ತಿಯನ್ನು ತಂದ್ರೆಗುಡಿಕೊಪ್ಪಲು ಗ್ರಾಮಕ್ಕೆ ಕೊಂಡೊಯ್ದು, ಅಲ್ಲಿನ ಶ್ರೀ ತಂದ್ರೆಯಮ್ಮ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದರು.
ಜಾತ್ರೆ ಹಾಗೂ ಧಾರ್ಮಿಕ ವಿಧಿವಿಧಾನ ಪೂರ್ಣಗೊಂಡ ಬಳಿಕ ಉತ್ಸವ ಮೂರ್ತಿಯನ್ನು ಮೂಲಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು. ಉತ್ಸವದಲ್ಲಿ ತಂದ್ರೆಗುಡಿಕೊಪ್ಪಲು, ಅತ್ತಿಗೋಡು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.