ವನ್ಯಜೀವಿಗಳು, ಪರಿಸರಕ್ಕೆ ತ್ಯಾಜ್ಯ ಮಾರಕ

ನಾಗರಹೊಳೆ ವನ್ಯಜೀವಿ ವಲಯದ ಆರ್‌ಎಫ್‌ಒ ಜಿ.ಮಂಜು ಹೇಳಿಕೆ
ಅರಣ್ಯ ಪ್ರದೇಶದ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ
ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಮತ್ತು ಇತರ ಸಂಘ- ಸಂಸ್ಥೆಗಳ ವತಿಯಿಂದ ತಾಲೂಕಿನ ಬೂದಿತಿಟ್ಟು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸಲಾಯಿತು. ಆರ್‌ಎಫ್‌ಒ ಜಿ.ಮಂಜು, ಡಿಆರ್‌ಎಫ್‌ಒ ರಾಮಣ್ಣ, ಟಿ.ಎಸ್.ಹರೀಶ್, ಕೆ.ಡಿ.ಸಂದೀಪ್ ಇತರರಿದ್ದರು.
Published on: 

ಪಿರಿಯಾಪಟ್ಟಣ: ಅರಣ್ಯ ಪ್ರದೇಶಗಳಲ್ಲಿ ತ್ಯಾಜ್ಯ ಪದಾರ್ಥಗಳನ್ನು ಎಸೆಯುವುದರಿಂದ ವನ್ಯಜೀವಿಗಳಿಗೆ ಮತ್ತು ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ನಾಗರಹೊಳೆ ವನ್ಯಜೀವಿ ವಲಯದ ಆರ್‌ಎಫ್‌ಒ ಜಿ.ಮಂಜು ತಿಳಿಸಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ವೈಲ್ಡ್ ಟ್ರಸ್ಟ್ ಆಫ್ ಇಂಡಿಯಾ ತಾಲೂಕು ಘಟಕ, ರೋಟರಿ ಪಿರಿಯಾಪಟ್ಟಣ ಐಕಾನ್ಸ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅಂಜನಾದ್ರಿ ಯೋಗ ಬಳಗದ ವತಿಯಿಂದ ನಾಗರಹೊಳೆ ವನ್ಯಜೀವಿ ವಲಯದ ಬೂದಿತಿಟ್ಟು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅರಣ್ಯ ಪ್ರದೇಶದ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವನ್ಯಜೀವಿಗಳು ರಾಷ್ಟ್ರದ ಅಮೂಲ್ಯ ಸಂಪತ್ತು. ಅವುಗಳು ವಾಸಿಸುವ ಅರಣ್ಯ ಪ್ರದೇಶಗಳಲ್ಲಿ ಮಾನವನ ನಿರ್ಲಕ್ಷೃ ಮತ್ತು ಅಜಾಗರೂಕತೆೆಯಿಂದಾಗಿ ಪರಿಸರಕ್ಕೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸ್ವಚ್ಛತೆ ಎಂಬುದು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರೋಟರಿ ಮತ್ತು ಇತರ ಸಂಘ- ಸಂಸ್ಥೆಗಳು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ವೈಲ್ಡ್ ಟ್ರಸ್ಟ್ ಆಫ್ ಇಂಡಿಯಾ ರಾಜ್ಯ ಸಂಚಾಲಕ ವೆಂಕಟನಾಯ್ಡು ಮಾತನಾಡಿ, ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಕೊಡುಗೆ ಮಹತ್ವದ್ದಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ. ಅರಣ್ಯ ಪ್ರದೇಶಗಳು ಕೇವಲ ವನ್ಯಜೀವಿಗಳ ಆವಾಸಸ್ಥಾನವಲ್ಲ. ಅವು ಪರಿಸರ ಸಮತೋಲನದ ಪ್ರಮುಖ ಕೊಂಡಿಗಳಾಗಿವೆ. ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡುವುದರಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ, ವನ್ಯಜೀವಿಗಳಿಗೂ ಅಪಾಯ ಎಂದರು.

ಬೂದಿತಿಟ್ಟು ಅರಣ್ಯ ಚೆಕ್‌ಪೋಸ್ಟ್‌ನಿಂದ ಮೂರು ಕಿ.ಮೀ.ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಮದ್ಯದ ಬಾಟಲಿಗಳು, ನೀರಿನ ಬಾಟಟ್‌ಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.

ಡಿಆರ್‌ಎಫ್‌ಒ ರಾಮಣ್ಣ, ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಟಿ.ಎಸ್.ಹರೀಶ್, ಕಾರ್ಯದರ್ಶಿ ಕೆ.ಡಿ.ಸಂದೀಪ್, ಸಹಾಯಕ ಪ್ರಾಂತಪಾಲ ಎಂ.ಡಿ.ರಂಗಸ್ವಾಮಿ, ಸಿ.ಎನ್.ವಿಜಯ್, ಸದಸ್ಯರಾದ ಬಿ.ಆರ್.ಗಣೇಶ್, ಧನಂಜಯ್, ಆನಂದ್, ರವಿಚಂದ್ರ, ಅಂಜನಾದ್ರಿ ಯೋಗ ಬಳಗದ ನವೀನ್ ಕುಮಾರ್, ಕೆಂಪಣ್ಣ, ಬಿ.ಜೆ.ಬಸವರಾಜ್, ಸುರೇಶ್, ಮಂಜುನಾಥ್, ಮಹೇಶ್, ವಸಂತ್ ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net