ಮೈಸೂರು:ವಚನಗಳಲ್ಲಿರುವ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಯುವ ಪೀಳಿಗೆಗೆ ತಲುಪಿಸುವ ಮೂಲಕ ಅವರನ್ನು ಜಾಗೃತಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುತ್ತೂರು ಮಹಾಸಂಸ್ಥಾನ, ಬಸವ ಬಳಗಳ ಒಕ್ಕೂಟದಿಂದ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಆಯೋಜಿಸಿರುವ ಎರಡು ದಿನಗಳ ವಲಯ ಮಟ್ಟದ ವಚನ ಸಂಗೀತ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಚನ ಎಂದರೆ ಅದು ಕೇವಲ ಸಾಹಿತ್ಯವಲ್ಲ. ಬದುಕಿನ ಸತ್ಯ, ಸಮಾನತೆಯ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಘೋಷಣೆಯಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಾಜದ ಮುಂದೆ ಇಟ್ಟ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಜಾತಿ, ವರ್ಗ, ಲಿಂಗದ ಭೇದ ಮೀರಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಬಸವಣ್ಣನವರು, ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಗೆ ಗೌರವದ ಸ್ಥಾನ ನೀಡಿದರು ಎಂದರು.
ಜೀವನದ ಸಾರ, ಬದುಕಿನ ಸಾರ್ಥಕತೆಯನ್ನು ಸಾರುವ ವಚನಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಅಗಬೇಕು. ಹಾಗಾಗಿ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಮತ್ತು ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವಲಯಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಿದೆ ಎಂದರು.
ವಚನ ಸಾಹಿತ್ಯಕ್ಕೆ ಸಂಗೀತದ ಸ್ಪರ್ಶ ದೊರೆತಾಗ ಅದರ ಸಂದೇಶ ಇನ್ನಷ್ಟು ಪರಿಣಾಮಕಾರಿಯಾಗಿ ಜನಮನವನ್ನು ತಲುಪುತ್ತದೆ. ಇಂದಿನ ಯುವ ಪೀಳಿಗೆಗೆ ವಚನಗಳನ್ನು ಕೇವಲ ಇತಿಹಾಸದ ಪುಟಗಳಲ್ಲಿ ತಿಳಿಸುವ ಬದಲು ಸಂಗೀತ, ಕಲೆ ಹಾಗೂ ಆಧುನಿಕ ಮಾಧ್ಯಮಗಳ ಮೂಲಕ ಅವರ ಬದುಕಿನ ಭಾಗವಾಗಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕಾಣುತ್ತಿರುವ ದಾಸೋಹದ ಪರಂಪರೆಯ ಹಿಂದೆ ಮಠ-ಮಾನ್ಯಗಳ ಮಹತ್ವದ ಕೊಡುಗೆಯಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ, ಆಶ್ರಯ ಮತ್ತು ಜ್ಞಾನ ದೊರೆಯಬೇಕು ಎಂಬ ಮಾನವೀಯ ಆಶಯವನ್ನು ಮಠಗಳು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿವೆ. ಆದ್ದರಿಂದ ವಲಯಮಟ್ಟದ ವಚನ ಸಂಗೀತ ಉತ್ಸವಗಳನ್ನು ಮಠಮಾನ್ಯಗಳಲ್ಲೇ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಸವಣ್ಣನವರ ಬಗ್ಗೆ ಮಾತನಾಡುವುದು ಮಾತ್ರವಲ್ಲ, ಅವರ ವಿಚಾರಗಳನ್ನು ಆಡಳಿತ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಬದ್ಧತೆ ಅಗತ್ಯ. ಹಿಂದೆ ಅನೇಕ ಮುಖ್ಯಮಂತ್ರಿಗಳು ಬಸವಣ್ಣನವರ ವಿಚಾರಗಳ ಬಗ್ಗೆ ಭಾಷಣ ಮಾಡುತ್ತಿದ್ದರು. ಆದರೆ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ವಚನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿ, ಪರಿಚಯಿಸಿದ ಮಹನೀಯರನ್ನು ಸ್ಮರಿಸಬೇಕು. ಅದರಲ್ಲೂ ಫ.ಗು.ಹಳಕಟ್ಟಿಯವರ ಕೊಡುಗೆ ಅಪಾರ. ಚದುರಿ ಹೋಗಿದ್ದ ವಚನಗಳನ್ನು ಹುಡುಕಿ, ಸಂಗ್ರಹಿಸಿ, ಪ್ರಕಟಿಸಿ ಕನ್ನಡಿಗರ ಮನೆ-ಮನಗಳಿಗೆ ತಲುಪಿಸುವಲ್ಲಿ ಅವರು ಜೀವನವನ್ನೇ ಸಮರ್ಪಿಸಿದರು ಎಂದರು.
ಬಸವಣ್ಣನವರ ಪತ್ನಿ ನೀಲಾಂಬಿಕೆ ಅವರ ತವರೂರು ತಂಗಡಗಿ. ಅದೇ ತಂಗಡಗಿ ಊರಿನವನಾಗಿ ನಮ್ಮ ಹಿರಿಯರು ಹುಟ್ಟಿದ್ದರಿಂದ ನನ್ನ ಹೆಸರಿನಲ್ಲಿ ತಂಗಡಗಿ ಸೇರ್ಪಡೆಯಾಗಿರುವುದು ನನ್ನ ಪುಣ್ಯ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮೈಲಾಕ್ ಅಧ್ಯಕ್ಷ ಎಚ್.ಡಿ.ಗಣೇಶ್, ಬಸವ ಬಳಗಗಳ ಒಕ್ಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಶ್ರೀ, ನಿರ್ದೇಶಕಿ ಕೆ.ಎಂ.ವಸುಂಧರ, ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಇತರರು ಇದ್ದರು.