ವಂಚಕರಿಬ್ಬರಿಗೆ 6 ತಿಂಗಳು ಜೈಲು

ಎಟಿಎಂಗೆ ಪೂರ್ಣ ಹಣ ತುಂಬದೆ ವಂಚನೆ
 ನ್ಯಾಯಾಧೀಶರ ಆದೇಶ
ನ್ಯಾಯಾಧೀಶರ ಆದೇಶ
Published on: 

ಬೈಲುಕುಪ್ಪೆ: ಎಟಿಎಂಗೆ ಪೂರ್ಣ ಹಣ ತುಂಬದೆ ವಂಚಿಸಿದ್ದ ಇಬ್ಬರು ಅಪರಾಧಿಗಳಿಗೆ ಪಿರಿಯಾಪಟ್ಟಣದ ನ್ಯಾಯಾಲಯ ಆರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು ತಲಾ 1,70,000 ರೂ. ದಂಡ ವಿಧಿಸಿದೆ.

ಕೊಡಗು ಜಿಲ್ಲೆಯ ಕುಶಾಲನಗರದ 7ನೇ ಹೊಸಕೋಟೆಯ ನಿವಾಸಿ ಅಬ್ದುಲ್ ಸಲಾಂ, ಸೀಗೆಹೊಸೂರು ಗ್ರಾಮದ ನಿವಾಸಿ ರವಿ ಶಿಕ್ಷೆಗೆ ಗುರಿಯಾದವರು. ಈ ಇಬ್ಬರು ಎಟಿಎಂಗಳಿಗೆ ಹಣ ಪೂರೈಸುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2018ರ ಮಾ.28ರಂದು ಇಲ್ಲಿನ ಲಾಮಕ್ಯಾಂಪ್ ರಸ್ತೆಯಲ್ಲಿರುವ ಬ್ಯಾಂಕ್ ಎಟಿಎಂಗೆ 5,00,000 ರೂ. ತುಂಬಿಸಲು ಕಂಪನಿ ಈ ಇಬ್ಬರನ್ನು ನಿಯೋಜಿಸಿತ್ತು. ಈ ವೇಳೆ 1,98, 500 ರೂ. ಮಾತ್ರ ತುಂಬಿಸಿ ಉಳಿದ 3,01,500 ರೂ.ವನ್ನು ವಂಚಿಸಿದ್ದರು. ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪಿರಿಯಾಪಟ್ಟಣದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2026ರ ಅ.3ರಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಆರೋಪಿಗಳಿಗೆ ಆರು ತಿಂಗಳ ಸಾದಾ ಕಾರಾಗೃಹವಾಸ ಮತ್ತು ತಲಾ-1,70,000 ರೂ. ದಂಡ ವಿಧಿಸಿ ಆದೇಶಿಸಿದರು. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಎರಡು ತಿಂಗಳ ಕಾರಗೃಹ ವಾಸ ಅನುಭವಿಸುವಂತೆ ತಿಳಿಸಿದ್ದಾರೆ.

ಅಭಿಯೋಜಕ ಶಿವಪ್ರಸಾದ್ ಗಾವಂಕರ್ ವಾದ ಮಂಡಿಸಿದ್ದರು. ಅಂದಿನ ಪಿಎಸೈ ಎಂ.ಮಹೇಶ್ ಪ್ರಕರಣ ತನಿಖೆ ನಡೆಸಿದ್ದರು. ಪಿಎಸೈ ಸಿ.ಯು.ಸವಿ ವರದಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net