ರಾಜ್ಯದ ರೈತರ ಸಾಲ ಮನ್ನಾ ಮಾಡಿ

ಕಬ್ಬು ಬೆಳೆಗಾರರ ರೈತ ಸಂಘದ ಅಧ್ಯಕ್ಷ ಹಾಡ್ಯರವಿ ಒತ್ತಾಯ
ಬರ ಪರಿಹಾರ ಘೋಷಿಸುವಂತೆ ಆಗ್ರಹಿಸಿ ನಂಜನಗೂಡು ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘ ಪ್ರತಿಭಟನೆ ನಡೆಸಿತು. ಹಾಡ್ಯರವಿ, ಮಹೇಶ್ ಅಂಡುವಿನಳ್ಳಿ, ಅಡಕನಹಳ್ಳಿ ತಿಮ್ಮಪ್ಪ, ಎಂ. ಚಿಕ್ಕಸ್ವಾಮಿ, ಮಹದೇವಸ್ವಾಮಿ ಮತ್ತಿತರರಿದ್ದರು.
ಬರ ಪರಿಹಾರ ಘೋಷಿಸುವಂತೆ ಆಗ್ರಹಿಸಿ ನಂಜನಗೂಡು ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘ ಪ್ರತಿಭಟನೆ ನಡೆಸಿತು. ಹಾಡ್ಯರವಿ, ಮಹೇಶ್ ಅಂಡುವಿನಳ್ಳಿ, ಅಡಕನಹಳ್ಳಿ ತಿಮ್ಮಪ್ಪ, ಎಂ. ಚಿಕ್ಕಸ್ವಾಮಿ, ಮಹದೇವಸ್ವಾಮಿ ಮತ್ತಿತರರಿದ್ದರು.
Published on: 

ನಂಜನಗೂಡು: ಕರ್ನಾಟಕ ಸರ್ಕಾರ 101 ತಾಲೂಕನ್ನು ಬರ ಪ್ರದೇಶವೆಂದು ಎಂದು ಘೋಷಣೆ ಮಾಡಿ ಕಾಲಹರಣ ಮಾಡುತ್ತದೆ ರಾಜ್ಯದಲ್ಲಿರುವ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುವಂತೆ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಅಧ್ಯಕ್ಷ ಹಾಡ್ಯರವಿ ಒತ್ತಾಯಿಸಿದರು.

ನಗರದ ಎಪಿಎಂಸಿ ಕೃಷಿ ಮಾರುಕಟ್ಟೆಯಿಂದ ಎಂ.ಜಿ.ರಸ್ತೆ, ಆರ್.ಪಿ.ರಸ್ತೆ ಮುಖಾಂತರ ಮೆರವಣಿಗೆ ತೆರಳಿ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಬರ ಸಂಪೂರ್ಣವಾಗಿ ಆವರಿಸಿದೆ. ರಾಜ್ಯ ಸರ್ಕಾರ ಈಗಾಗಲೇ 101 ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದೆ. ತಾಲೂಕಿನಲ್ಲಿ ಯಾವುದೇ ರೀತಿಯ ಬರದ ಕಾಮಗಾರಿ ನಡೆಯುತ್ತಿಲ್ಲ. ಪಂಚಾಯಿತಿ ಮಟ್ಟದಲ್ಲಿ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯುತ್ತಿಲ್ಲ, ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಹಾಗೂ ದಿನ ಬಳಕೆಗೆ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಾಗಿದೆ. ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು, ಕಬಿನಿ, ನಗು, ಹುಲ್ಲಳ್ಳಿ, ರಾಂಪುರ ನಾಲೆಗಳಿಗೆ ತಕ್ಷಣ ನೀರು ಹಾಯಿಸಬೇಕು. ಹುರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು, ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ಹರಿಸಬೇಕು. ಕೆರೆ-ಕಟ್ಟೆಗಳಲ್ಲಿ ಹೊಳೆತ್ತುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಹೇಶ್ ಅಂಡುವಿನಳ್ಳಿ, ಅಡಕನಹಳ್ಳಿ ತಿಮ್ಮಪ್ಪ, ಎಂ. ಚಿಕ್ಕಸ್ವಾಮಿ, ಮಹದೇವಸ್ವಾಮಿ, ಮರಿಸ್ವಾಮಿ, ಶಾಂತಪ್ಪ, ಸಿದ್ದಪ್ಪ, ಮದನ್, ಜೀವನ್, ಕೆಂಪಣ್ಣ, ಮಲ್ಲೇಶ್, ಮಹೇಶ್, ರವಿಕುಮಾರ್, ಕುರಟ್ಟಿ ಗುರು, ಸೋಮಣ್ಣ, ಆನಂದ, ಚಂದ್ರು, ಮಹಾದೇವಪ್ಪ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net