

ಸರಗೂರು: ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಗಣ್ಯರು ಇತ್ತೀಚೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಕ್ರೀಡೆ ಯುವಕರಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇಂತಹ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಿದ್ದು, ಯುವಕರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣದಿಂದ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ಪಂದ್ಯಾವಳಿಯುದ್ದಕ್ಕೂ ರೋಚಕ ಹಣಾಹಣಿಗಳು ನಡೆದಿದ್ದು, ಕ್ರೀಡಾಂಗಣದಲ್ಲಿ ಕ್ರೀಡಾಭಿಮಾನಿಗಳ ಉತ್ಸಾಹ ಗಮನ ಸೆಳೆಯಿತು.
ಅಂತಿಮ ಪಂದ್ಯದಲ್ಲಿ ಸರಗೂರು ಎವೈಸಿ ಹಾಗೂ ಕೋಟೆ ಜಂಗಲ್ ತಂಡಗಳು ಮುಖಾಮುಖಿಯಾಗಿದ್ದು, ತೀವ್ರ ಪೈಪೋಟಿಯ ಬಳಿಕ ಸರಗೂರು ಎವೈಸಿ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಯಿತು. ಕೋಟೆ ಜಂಗಲ್ ತಂಡ ದ್ವಿತೀಯ ಸ್ಥಾನ, ಎವೈಸಿ ಬಿ ತಂಡ ತೃತೀಯ ಸ್ಥಾನ ಹಾಗೂ ಕಬಿನಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹಾಗೂ ವಿಜೇತ ತಂಡಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಬಿ.ಮಟಕೆರೆ ಎಸ್ಸಿ ಕಾಲನಿ ಗ್ರಾಮದ ಸೈನಿಕ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರೇಮಕುಮಾರ್, ಪಪಂ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ದಸಂಸ ಜಿಲ್ಲಾ ಸಂಚಾಲಕ ಎಸ್.ಡಿ.ಸಣ್ಣಸ್ವಾಮಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜಿಯಾರ, ಮುಖಂಡರಾದ ಸುಭಾನ್, ಮಲ್ಲೇಶ್, ಶಿವಣ್ಣ, ಇದಿಯಪ್ಪ, ದೊಡ್ಡ ಬೈರ, ಗ್ರಾಮೀಣ ಮಹೇಶ್, ಮಹೇಂದ್ರ,ಭರತ್, ಶ್ಯಾಂಡಿ, ಗೋಪಾಲ್, ಸರಗೂರು ಕೃಷ್ಣ, ರವಿಚಂದ್ರನ್, ಮುಜೀಬ್, ಆಯೋಜಕರಾದ ರಾಮು, ಕುಮಾರ್, ಜಗದೀಶ್, ಚಂದ್ರ, ಅಭಿಷೇಕ್ ಉಪಸ್ಥಿತರಿದ್ದರು.