

ಮೈಸೂರು: ಅಪಾರ ಕನಸುಗಳೊಂದಿಗೆ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನಶೀಲರಾದರೆ ಸಾಧನೆ ಸುಲಭ ಸಾಧ್ಯ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಸಿದ್ಧಾರ್ಥನಗರದ (ಕುರುಬಾರಹಳ್ಳಿ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ವಿವಿಧ ವೇದಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಮುಂದಿದ್ದಾರೆ. ಓದಿನಲ್ಲಿ ಹಿಂದಿದ್ದಾರೆ. ಶೈಕ್ಷಣಿಕ ಅವಧಿಯಲ್ಲಿ ಶಿಕ್ಷಣದ ಕಡೆಗೆ ಹೆಚ್ಚಿನ ಶ್ರದ್ಧೆ ವಹಿಸಿ ಬದುಕು ರೂಪಿಸಿಕೊಳ್ಳಬೇಕು. ಸೂಕ್ತ ಮಾರ್ಗದರ್ಶನ ದೊಂದಿಗೆ ಉನ್ನತ ಗುರಿಮುಟ್ಟಬೇಕು ಎಂದು ಹೇಳಿದರು.
ವಿದ್ಯಾವಂತರಾದ ಮೇಲೆ ಸಮಾಜಕ್ಕೆ ನಾವು ಏನಾದರೂ ಕೊಡುಗೆ ಕೊಟ್ಟರೆ ಮಾತ್ರ ನಾವು ಓದಿದ ಶಾಲೆ ಹಾಗೂ ನಮ್ಮ ಸಮಾಜವೂ ಬೆಳೆಯುತ್ತದೆ. ಅಧಿಕಾರದಲ್ಲಿ ಇದ್ದಾಗ ಕೈಲಾದಷ್ಟು ಬಡಜನರಿಗೆ ಉಪಕಾರ ಮಾಡಬೇಕು ಎಂದವರು ಸಲಹೆ ನೀಡಿದರು.
ನಂಜುಮಳಿಗೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ 60 ವರ್ಷದ ಹಿಂದೆ ವ್ಯಾಸಂಗ ಮಾಡಿ, ಅಮೆರಿಕದಲ್ಲಿ ವೈದ್ಯರಾಗಿರುವವರು, ಓದಿದ ಶಾಲೆಯನ್ನು 1.80 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಇನ್ನಿತರ ಸೌಲಭ್ಯ ನೀಡುವ ಮೂಲಕ ಶಾಲೆಯ ಋಣ ತೀರಿಸಿದ್ದಾರೆ. ಇಂಥವರು ವಿದ್ಯಾರ್ಥಿಗಳಿಗೆ ಆದರ್ಶನವಾಗಲಿ ಎಂದು ಹೇಳಿದರು.
ಸೈಬರ್ ಅಪರಾಧ ಪ್ರಕರಣ ಹೆಚ್ಚಳ:
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳಲ್ಲಿ ಯುವಕರು ಭಾಗಿಯಾಗುತ್ತಿರುವುದು ನಮ್ಮ ಇಂದಿನ ಶೈಕ್ಷಣಿಕ ಮೌಲ್ಯಗಳ ಕುಸಿತವನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಗಮನ ಹರಿಸಿ ಸಾಧನೆ ಮಾಡುವ ಗುರಿ ಹೊಂದಬೇಕು. ಶಿಕ್ಷಣವು ಪದವಿ ಗಳಿಸುವುದಕ್ಕಷ್ಟೇ ಸೀಮಿತವಾಗದೆ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈಯಲು ಪ್ರಮುಖ ವೇದಿಕೆಯಾಗಲಿ ಎಂದು ಶ್ರೀವತ್ಸ ಆಶಿಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ.ಮೈಸೂರು ಗುರುರಾಜ್ ಮಾತನಾಡಿ, ಮಕ್ಕಳು ಎಷ್ಟೇ ಓದಿ ಬೆಳೆದರೂ ತಂದೆ, ತಾಯಿಗಳಿಗೆ ಗೌರವ ನೀಡುವುದನ್ನು ಮರೆಯಬಾರದು. ತಮಗೆ ಸಿಗದೇ ಇರುವ ಅವಕಾಶ ಮಕ್ಕಳಿಗಾದರೂ ಸಿಗಲಿ ಎಂಬ ಕಾರಣಕ್ಕೆ ಪಾಲಕರು ಶಿಕ್ಷಣ ಕೊಡಿಸಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಅವಕಾಶ ಮಾಡಿಕೊಡುತ್ತಾರೆ. ಇದನ್ನು ಅರಿತು ವ್ಯಾಸಂಗ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ಗುರುರಾಜ್ ಅವರು ವೇದಿಕೆಯಲ್ಲಿ ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಗೀತೆಗಳನ್ನು ಹಾಡಿದರು.
ಟೆರೆಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಆಂಥೋನಿ ಮೋಸೆಸ್, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಮಾಯಾದೇವಿ, ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಎನ್.ಗುರುಪಾದಸ್ವಾಮಿ, ಖಜಾಂಚಿ ಡಾ.ಕುಮಾರ್ ಬೆಳಲೆ ಇತರರು ಇದ್ದರು.