ಮೈಸೂರು ವಿಭಾಗದಿಂದ "ರೈಲ್ವೆ ನಿಲ್ದಾಣ ಮಹೋತ್ಸವ’

ಹಿರಿಯ ಸಿಬ್ಬಂದಿಗೆ ಗೌರವ ಸಮರ್ಪಣೆ
"Railway Station Festival" by the Mysuru Division
ಮೈಸೂರು ರೈಲು ನಿಲ್ದಾಣದಲ್ಲಿ ‘ನಿಲ್ದಾಣ ಮಹೋತ್ಸವ’ ಆಚರಿಸಲಾಗುವುದು. ಶಮ್ಮಾಸ್ ಹಮೀದ್, ಸುಬ್ಬೋಜಿ ರಾವ್, ಎಂ.ಎಸ್ ತೇಜ್ ಕುಮಾರ್ ಇತರರು ಇದ್ದರು.
Published on: 

ಮೈಸೂರು: ಕರ್ನಾಟಕದ ಐತಿಹಾಸಿಕ ರೈಲು ನಿಲ್ದಾಣಗಳಲ್ಲಿ ಒಂದಾದ ಮೈಸೂರು ರೈಲು ನಿಲ್ದಾಣದಲ್ಲಿ ‘ನಿಲ್ದಾಣ ಮಹೋತ್ಸವ’ ಆಚರಿಸಲಾಗಿತ್ತು.

ಮೈಸೂರು ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ವಹಿಸಿದ್ದರು. ನಿವೃತ್ತ ರೈಲ್ವೆ ನೌಕರ ಸುಬ್ಬೋಜಿ ರಾವ್, ಮೈಸೂರಿನ ಅಂತಾರಾಷ್ಟ್ರೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಎಂ.ಎಸ್.ತೇಜ್ ಕುಮಾರ್, ಡಿಆರ್‌ಯುಸಿಸಿ ಮತ್ತು ಝಡ್‌ಆರ್‌ಯುಸಿಸಿ ಸದಸ್ಯರು, ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು, ಲಲಿತಾ ಶಾಲೆಯ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಇದ್ದರು.

ಗಣ್ಯರನ್ನು ಸನ್ಮಾನಿಸಿದ ಎಡಿಆರ್‌ಎಂ ಶಮ್ಮಾಸ್ ಹಮೀದ್, ಮೈಸೂರು ರೈಲು ನಿಲ್ದಾಣದ ಐತಿಹಾಸಿಕ ಮಹತ್ವ, ಅದರ ಪರಂಪರಾಗತ ವಾಸ್ತುಶಿಲ್ಪ ಮತ್ತು ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ತಿಳಿಸಿಕೊಟ್ಟರು.

ಲಲಿತಾ ಶಾಲೆಯ ವಿದ್ಯಾರ್ಥಿಗಳು ಮತ್ತು ರೈಲ್ವೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನೂ ವಿತರಿಸಲಾಯಿತು.

ಮೈಸೂರು ಸಂಸ್ಥಾನದ ಮಹಾರಾಜರು ಮೈಸೂರು ಸ್ಟೇಟ್ ರೈಲ್ವೆ ಮೂಲಕ ರೈಲ್ವೆ ಸಂಪರ್ಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರ ಫಲವಾಗಿ ಮೈಸೂರು-ನಂಜನಗೂಡು ರೈಲ್ವೆ ಮಾರ್ಗದ 24.4 ಕಿ.ಮೀ. ಉದ್ದವನ್ನು 6.02 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ 1891ರ ಡಿಸೆಂಬರ್‌ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು.

1951ರ ಏ.14ರಂದು ಮೈಸೂರು ಸ್ಟೇಟ್ ರೈಲ್ವೆಯನ್ನು ದಕ್ಷಿಣ ರೈಲ್ವೆಯೊಂದಿಗೆ ವಿಲೀನಗೊಳಿಸಲಾಯಿತು. 2003ರಲ್ಲಿ ನೈಋತ್ಯ ರೈಲ್ವೆ ವಲಯ ಸ್ಥಾಪನೆಯಾದ ನಂತರ ಮೈಸೂರು ವಿಭಾಗವು ಈ ವಲಯದ ಭಾಗವಾಯಿತು. ಮೈಸೂರು-ಬೆಂಗಳೂರು ರೈಲು ಮಾರ್ಗವನ್ನು 1993ರ ಏ.16ರಂದು ಬ್ರಾಡ್‌ಗೇಜ್‌ಗೆ ಪರಿವರ್ತಿಸಿ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಭಾರತೀಯ ರೈಲ್ವೆಯ ಭವ್ಯ ಪರಂಪರೆಯನ್ನು ಸಂಭ್ರಮಿಸಲು, ರೈಲ್ವೆ ನೌಕರರ ಕೊಡುಗೆಗಳನ್ನು ಗೌರವಿಸಲು ಹಾಗೂ ರೈಲ್ವೆ ನಿಲ್ದಾಣಗಳು ಆಧುನಿಕ, ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳಾಗಿ ಪರಿವರ್ತನೆಗೊಳ್ಳುತ್ತಿರುವ ಪ್ರಕ್ರಿಯೆಯನ್ನು ಪ್ರದರ್ಶಿಸಲು ನಿಲ್ದಾಣ (ಸ್ಟೇಷನ್) ಮಹೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.