ಮೈಸೂರು ಆಶ್ರಮಕ್ಕೆ ಸ್ವಾಮಿ ಯುಕ್ತೇಶಾನಂದಜೀ ಸಾರಥ್ಯ

ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸ್ವಾಮಿ ಮುಕ್ತಿದಾನಂದಜೀ ಬೆಂಗಳೂರಿಗೆ ವರ್ಗ
ಮೈಸೂರು ಆಶ್ರಮಕ್ಕೆ ಸ್ವಾಮಿ ಯುಕ್ತೇಶಾನಂದಜೀ ಸಾರಥ್ಯ
ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅವರನ್ನು ಗುರುವಾರ ಸಂಜೆ ಗೌರವಿಸಿ ಬೀಳ್ಕೊಡಲಾಯಿತು. ನೂತನ ಅಧ್ಯಕ್ಷ ಸ್ವಾಮಿ ಯುಕ್ತೇಶಾನಂದಜೀ ಇನ್ನಿತರ ಸಾಧು ಸಂತರು ಇದ್ದರು. Swami Yukteshanandaji at the helm of the Mysore Ashrama
Published on: 

ಮೈಸೂರು: ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಸ್ವಾಮಿ ಯುಕ್ತೇಶಾನಂದಜೀ ನಿಯೋಜನೆಗೊಂಡಿದ್ದಾರೆ.

ನಿರ್ಗಮಿತ ಶ್ರೀಗಳು ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಜವಾಬ್ದಾರಿಯನ್ನು ಶೀಘ್ರದಲ್ಲೇ ವಹಿಸಿಕೊಳ್ಳಲಿದ್ದಾರೆ.

ಮೈಸೂರಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಮುಕ್ತಿದಾನಂದಜೀ ಗುರುವಾರ ಜವಾಬ್ದಾರಿಯನ್ನು ಯುಕ್ತೇಶಾನಂದರಿಗೆ ಹಸ್ತಾಂತರಿಸಿದರು. 13 ವರ್ಷಗಳ ಕಾಲ ಶ್ರೀರಾಮಕೃಷ್ಣ ವಿದ್ಯಾಶಾಲೆಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ ಯುಕ್ತೇಶಾನಂದರಿಗೆ ಶತಮಾನ ಪೂರ್ಣಗೊಳಿಸಿದ ಆಶ್ರಮದ ಸಾರಥ್ಯ ದೊರಕಿದೆ.

ನೂತನ ಅಧ್ಯಕ್ಷರ ಸ್ವಾಗತ ಮತ್ತು ನಿರ್ಗಮಿತ ಅಧ್ಯಕ್ಷರ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ ಸಂಜೆ ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಸರಳವಾಗಿ ನೆರವೇರಿತು. ಆಶ್ರಮದ ಸಾಧುಗಳು, ಭಕ್ತರು, ಸ್ವಯಂಸೇವಕರು, ಹಿತೈಷಿಗಳು ಸಾಕ್ಷಿಯಾದರು.

ಸುದೀರ್ಘ ಸೇವೆ: ಶ್ರೀರಾಮಕೃಷ್ಣ ವಿದ್ಯಾಶಾಲೆಯ ನಿವೃತ್ತ ಪ್ರಾಂಶುಪಾಲ ಕೀರ್ತಿಕುಮಾರ್ ಮಾತನಾಡಿ, ಮುಕ್ತಿದಾನಂದಜೀ 4 ದಶಕ ಕಾಲ ಆಶ್ರಮದ ಸೇವೆ ಮಾಡಿದ್ದಾರೆ. 1982ರಲ್ಲಿ ಮೈಸೂರು ಆಶ್ರಮಕ್ಕೆ ಸೇರ್ಪಡೆಗೊಂಡ ಅವರು, ಬಳಿಕ 2012ರಲ್ಲಿ ಮೈಸೂರು ಆಶ್ರಮಕ್ಕೇ ಅಧ್ಯಕ್ಷರಾದರು. ಅವರ ಸುದೀರ್ಘ ಸೇವೆಯಲ್ಲಿ ಆಶ್ರಮದ ಚಟುವಟಿಕೆಗಳು ವಿಸ್ತರಣೆಗೊಂಡಿವೆ. ಅಂತೆಯೇ, ಅನೇಕ ಅಡೆತಡೆ, ತೀವ್ರ ವಿರೋಧಗಳು ಬಂದರೂ ವಿವೇಕ ಸ್ಮಾರಕ ಮಾಡುವಲ್ಲಿ ಮುಕ್ತಿದಾನಂದಜೀ ಪಾತ್ರ ದೊಡ್ಡದು ಎಂದರು.

ಪರಿಶ್ರಮ ದೊಡ್ಡದು:

ದಾವಣಗೆರೆಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ ಮಾತನಾಡಿ, 43 ವರ್ಷ

ಆಶ್ರಮವನ್ನು ಮುನ್ನಡೆಸಿರುವ ಮುಕ್ತಿದಾನಂದಜೀ ಗರಡಿಯಲ್ಲಿ ಅನೇಕರು ಬೆಳೆದು ಸಾಧು ಸಂತರಾಗಿದ್ದಾರೆ. ವಿದ್ಯಾಶಾಲೆಯೂ ಪ್ರಗತಿ ಸಾಧಿಸಿದೆ. ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಆಶ್ರಮ ಸ್ಥಾಪನೆಯಲ್ಲಿ ಪರಿಶ್ರಮ

ದೊಡ್ಡದು ಎಂದರು.

ಬುಡಕಟ್ಟು ಮಕ್ಕಳಿಗಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ಶಾಲೆ ತೆರೆದು ಶೈಕ್ಷಣಿಕ ಪ್ರಗತಿ ನೆರವಾಗಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲೂ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲೂ ಯಾರ ವಿರುದ್ಧವೂ ಟೀಕೆ ಮಾಡದೆ, ದೋಷ ಹುಡುಕದೆ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಿದ ಶೈಲಿ ಮಾದರಿಯಾಗಿದೆ ಎಂದರು.

ಸಹನಾಗುಣಕ್ಕೆ ಅನ್ವರ್ಥ:

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ರಿಮ್ಸೆ) ಮುಖ್ಯಸ್ಥ ಸ್ವಾಮಿ ವೇದಾನಂದಜೀ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಧನೆ ಮಾಡುವ ನಿಟ್ಟಿನಲ್ಲಿ ಮುಕ್ತಿದಾನಂದರು ಆದರ್ಶಪ್ರಾಯ ರಾಗಿದ್ದಾರೆ. ಸಹನಾ ಗುಣಕ್ಕೆ ಅವರು ಅನ್ವರ್ಥ ಎಂದು ಬಣ್ಣಿಸಿದರು. ಬಸವನಗುಡಿ ಆಶ್ರಮದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಾನಂದಜೀ, ರಾಮಕೃಷ್ಣ ವಿದ್ಯಾಶಾಲೆ ಮುಖ್ಯಸ್ಥ ಮಹಿಪಾಲಾನಂದಜೀ ಇನ್ನಿತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net