ಮೈಸೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಸಡಗರ

ಮೆರವಣಿಗೆ ಸಾಗಿದ ಮಾರ್ಗದಲ್ಲಿ ಖಾಕಿ ಪಡೆ ಕಣ್ಗಾವಲು ಜಾನಪದ ಕಲಾತಂಡಗಳ ನೃತ್ಯಕ್ಕೆ ಮನಸೋತ ಜನ
ಮೈಸೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಸಡಗರ
ಅಶೋಕ ರಸ್ತೆಯಲ್ಲಿ ಸಾಗಿದ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ದೃಶ್ಯMass Ganesha immersion festivities in Mysuru
Published on

ಮೈಸೂರು: ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಿಗಿ ಬಂದೋಬಸ್ತ್ ನಡುವೆ ನಗರದಲ್ಲಿ ಭಾನುವಾರ ಶಾಂತಿಯುತ ನಡೆಯಿತು.

ಮೆರವಣಿಗೆ ಸಾಗಿದ ಮಾರ್ಗದಲ್ಲಿ ಖಾಕಿ ಪಡೆಯನ್ನು ನಿಯೋಜಿಸುವ ಮೂಲಕ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ನೋಡಿಕೊಳ್ಳಲಾಯಿತು. ವೀರನಗೆರೆ ಶ್ರೀವೀರ ಗಣಪತಿ ದೇವಸ್ಥಾನದ ಬಳಿ ವಿವಿಧ ಬಡಾವಣೆಗಳಿಂದ ಬಂದಿದ್ದ ಎಲ್ಲ ಗಣೇಶ ಮೂರ್ತಿಗಳಿಗೆ ಅರ್ಚಕ ಪ್ರಹ್ಲಾದ್‌ರಾವ್ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿದರು.

ಬಳಿಕ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಡಿ.ಹರೀಶ್‌ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ವಿನಾಯಕನಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಸುಡು ಬಿಸಿಲನ್ನು ಲೆಕ್ಕಿಸದೆ ಸಿಂಗಾರಗೊಂಡಿದ್ದ ಗೂಡ್ಸ್ ಆಟೋ, ಟಾಟಾ ಏಸ್ ವಾಹನಗಳಿಗೆ ಕೂರಿಸಿ ತಂದಿದ್ದರು. ಒಂದೊಂದು ಗಣೇಶ ಹೊತ್ತ ವಾಹನಗಳಿಗೆ ನಂಬರ್ ನೀಡಿದ್ದರಿಂದಾಗಿ ಕ್ರಮವಾಗಿ ಮೆರವಣಿಗೆ ಸಾಗಿತು. ನಾದಸ್ವರ, ಡೊಳ್ಳುಕುಣಿತ, ತಮಟೆ ಸೇರಿದಂತೆ ಹತ್ತಾರು ಜಾನಪದ ಕಲಾತಂಡಗಳ ಕಲಾವಿದರು ನೃತ್ಯ ಪ್ರದರ್ಶಿಸಿ ಮುಂದೆ ಸಾಗಿದರು. ಸಾವಿರಾರು ಕಾರ್ಯಕರ್ತರು ಜಯಘೋಷ ಕೂಗಿ ಹೆಜ್ಜೆ ಹಾಕಿದರು. ಕಾರ್ಯಕರ್ತರೊಂದಿಗೆ ಯದುವೀರ್, ಪ್ರತಾಪ್ ಸಿಂಹ ಪ್ರತ್ಯೇಕವಾಗಿ ಹೆಜ್ಜೆ ಹಾಕುತ್ತಿದರು.

ಮೆರವಣಿಗೆ ಮಿಲಾದ್ ಬಾಗ್ ವೃತ್ತಕ್ಕೆ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಅಶೋಕ ರಸ್ತೆಯಲ್ಲಿರುವ ಮಸೀದಿ ಮುಂಭಾಗ ಯಾವುದೇ ಸಮಸ್ಯೆ ಆಗದಂತೆ ಮೂರು ಸಿಎಆರ್ ವಾಹನಗಳನ್ನು ನಿಯೋಜಿಸಲಾಗಿತ್ತು. ಜತೆಗೆ, ಪೊಲೀಸರನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಈ ಜಾಗದಲ್ಲಿ ಕೆಲ ಹೊತ್ತು ಕಾರ್ಯಕರ್ತರು ನಿಂತು ಸಂಭ್ರಮಿಸಿದರು.

ಮುಖಂಡರು ಹೆಜ್ಜೆ ಹಾಕಿ ಹೊರಡುತ್ತಿದ್ದಂತೆ ವಾಹನಗಳು ಹಿಂಬಾಲಿಸುವ ಮೂಲಕ ಮೆರವಣಿಗೆ ಅಶೋಕ ವೃತ್ತ ತಲುಪಿತು. ನಂತರ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ವಿನಾಯಕ ಮೂರ್ತಿಗಳನ್ನು ತಲುಪಿದವು. ಎಲ್ಲ ಮೂರ್ತಿಗಳನ್ನು ಒಂದೆಡೆ ತಂದ ಮೇಲೆ ಸಾಮೂಹಿಕವಾಗಿ ಹೊರಟ ಮೆರವಣಿಗೆ ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿರಸ್ತೆ, ಬಸವೇಶ್ವರ ವೃತ್ತ, ಗನ್‌ಹೌಸ್ ವೃತ್ತಕ್ಕೆ ಬಂದು ಸೇರಿತು. ಅಲ್ಲಿಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿಗೆ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.

ಮೆರವಣಿಗೆ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕಾರ್ಯಕರ್ತರು ಹೊತ್ತು ಕುಣಿದು ಸಂಭ್ರಮಿಸಿದರು. ಅವರ ಪರ ಜಯಘೋಷಣೆ ಸಾಕಷ್ಟು ಬಾರಿ ಮೊಳಗಿತು. ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್‌ಗಳಾದ ಎಸ್.ಸತೀಶ್ ಸ್ವಾಮಿ, ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಕುಮಾರ್, ಎಂ.ಯು.ಸುಬ್ಬಯ್ಯ, ಪ್ರಮೀಳಾ ಭರತ್, ರಂಗಸ್ವಾಮಿ, ನಂದೀಶ್ ಪ್ರೀತಂ, ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ ಸಮಿತಿಯ ಎಚ್.ಜಿ.ಗಿರಿಧರ್, ಸಂಜಯ್, ಮುಖಂಡರಾದ ಮೈ.ವಿ.ರವಿಶಂಕರ್, ಎಲ್.ಆರ್. ಮಹದೇವಸ್ವಾಮಿ, ಸು.ಮುರುಳಿ, ಭಾನುಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು

ಮುಸ್ಲಿಮರಿಂದ ಮಜ್ಜಿಗೆ ವಿತರಣೆ

ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರಿಗೆ ಮುಸ್ಲಿಮರು ನೀರು, ಮಜ್ಜಿಗೆ ನೀಡಿ ಪ್ರೀತಿ ತೋರಿದರು. ಸಂಸದ ಯದುವೀರ್ ಅವರಿಗೆ ನೀರು, ಮಜ್ಜಿಗೆ ಕೊಟ್ಟರು. ಇದು ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಂಡು ಬಂದ ವಿಶೇಷ ದೃಶ್ಯ. ಅಶೋಕ ರಸ್ತೆಯ ಮಸೀದಿ ಬಳಿ ಬಂದ ಮೆರವಣಿಗೆಯಲ್ಲಿ ಬಿಸಿಲ ಬೇಗೆಗೆ ದಣಿದಿದ್ದ ಯದುವೀರ್‌ಗೆ ಕೈ ಮುಗಿದು ಗೌರವ ತೋರಿದ ಮುಸ್ಲಿಮರು, ಬಳಿಕ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಮಿಲಾದ್ ಬಾಗ್ ಬಳಿ ಹೆಚ್ಚಿನ ತುಕಡಿ

ಯಾವುದೇ ಘಟನೆ ನಡೆಯದಂತೆ ಮೆರವಣಿಗೆಯುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ವೀರನಗೆರೆಯಿಂದ ದೊಡ್ಡಗಡಿಯಾರದ ತನಕ ಇರುವ ಅಂಗಡಿಗಳು ಭಾನುವಾರದ ಹಿನ್ನೆಲೆಯಲ್ಲಿ ಬಂದ್ ಆಗಿದ್ದವು. ಕೆಲ ಅಂಗಡಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಿಸಲಾಗಿತ್ತು. ಮಿಲಾದ್ ಬಾಗ್ ಬಳಿ ಹೆಚ್ಚಿನ ತುಕಡಿ ನಿಯೋಜಿಸಿದರೆ, ಬೇರೆ ಕಡೆಗಳಲ್ಲಿ ಸಂಚಾರ ಮಾರ್ಗವನ್ನು ಬದಲಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಕೆಲ ಪ್ರದೇಶಗಳಲ್ಲಿ ನಿಂತಿದ್ದ ಯುವಕರನ್ನು ವಾಪಸ್ ಕಳುಹಿಸಲಾಯಿತು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಡಾ.ಹರ್ಷ ಪ್ರಿಯಂವದಾ, ಕೆ.ಎಸ್.ಸುಂದರರಾಜ್ ಬಂದೋಬಸ್ತ್ ಮೇಲುಸ್ತುವಾರಿ ವಹಿಸಿದ್ದರು. ಎಸಿಪಿಗಳು, ಇನ್‌ಸ್ಪೆಕ್ಟರ್, ಎಸ್‌ಐಗಳು ಸೇರಿದಂತೆ ಕಮಾಂಡೋ ಪಡೆಯನ್ನು ನಿಯೋಜಿಸಲಾಗಿತ್ತು. ಗಣಪತಿ ಮೂರ್ತಿ ಇದ್ದ ಒಂದೊಂದು ವಾಹನಗಳಿಗೆ ಪೊಲೀಸರನ್ನು ನಿಯೋಜನೆ ಮಾಡಿದ್ದರಿಂದ ತ್ವರಿತಗತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net