

ಮೈಸೂರು: ದಸರಾ, ರಾಜ್ಯೋತ್ಸವದ ಅಂಗವಾಗಿ ನಗರಪಾಲಿಕೆಯಿಂದ ವಾರ್ಡ್ ಸಂಖ್ಯೆ 35ರ ಸಾತಗಳ್ಳಿ ರಿಂಗ್‌ರಸ್ತೆಯ ಇಕ್ಕೆಲದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ 1250ಟನ್ ಕಸ ತೆರವುಗೊಳಿಸಲಾಯಿತು.
ಪಾಲಿಕೆಯ ವಲಯ 9ರ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ಆಯೋಜಿಸಿ ರಸ್ತೆಯ ಅಕ್ಕ, ಪಕ್ಕದಲ್ಲಿ ಸಂಗ್ರಹವಾಗಿದ್ದ ಘನತ್ಯಾಜ್ಯಕ್ಕೆ ಮುಕ್ತಿ ನೀಡಿದರು.
ರಿಂಗ್‌ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮತ್ತು ನೆಲಸಮ ಕಾಮಗಾರಿಗಳ ಅವಶೇಷಗಳು, ಸುರಿಯಲಾಗುತ್ತಿತ್ತು. ಇದರಿಂದ ರಸ್ತೆಯ ಸುತ್ತಮುತ್ತಲಿನ ಪರಿಸರದಲ್ಲಿ ಅಶುಚಿತ್ವ ಉಂಟಾಗಿ, ಸಾರ್ವಜನಿಕರಿಗೆ ತೊಂದರೆಯಾಗುವುದರ ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಇಲ್ಲಿ ಸಂಗ್ರಹವಾಗಿದ್ದ ಕಟ್ಟಡ ತ್ಯಾಜ್ಯ ಮತ್ತು ಕಸವನ್ನು ತೆರವುಗೊಳಿಸಿ, ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ತ್ಯಾಜ್ಯ ತೆರವುಗೊಳಿಸಿದ ನಂತರ, ಈ ಪ್ರದೇಶದಲ್ಲಿ ಪುನಃ ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಹಾಗೂ ಕಸ ಸುರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ರಸ್ತೆಯ ಬದಿಯಲ್ಲಿ ಹಸಿರು ಬಣ್ಣದ ಮೆಶ್, ಬ್ಯಾರಿಕೇಟ್ ಅಳವಡಿಸಲಾಯಿತು.
ಈ ಕಾಮಗಾರಿಯು ಸ್ವಚ್ಛ ಮೈಸೂರು, ಸುಂದರ ಮೈಸೂರು ಪರಿಕಲ್ಪನೆಗೆ ಪೂರಕವಾಗಿದ್ದು, ನಗರದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ.