ಮೈಸೂರಿನ ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದಿಂದ ಬನ್ನಿ ಮುಡಿಯುವ ಕಾರ್ಯಕ್ರಮ

ವಿಜಯದಶಮಿ ಅಂಗವಾಗಿ ಆಯೋಜನೆ
'Banni Mudiyuva' event organized by the North Karnataka Cultural Association, Mysuru
ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದಿಂದ ನಗರದಲ್ಲಿ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ‘ಬನ್ನಿ ಮುಡಿಯುವ’ ಕಾರ್ಯಕ್ರಮವನ್ನು ಭೀಮಪ್ಪ ಕ.ಲಾಳಿ ಉದ್ಘಾಟಿಸಿದರು. ಪಿ.ವಿ.ಅವರಾದಿ, ಡಾ. ಬಸವರಾಜ ಸಾಗರ್, ಪ್ರಮೋದ್ ಚಿಕ್ಕಮಣ್ಣೂರ್, ಅಶೋಕ್ ಬಿ.ಯಂಡಿಗೇರಿ, ಶಿವನಾಯ್ಕ, ರಾಜಶೇಖರ ಜವಳಿಗಿ ಇತರರು ಇದ್ದರು.
Published on: 

ಮೈಸೂರು: ಮೈಸೂರಿನ ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದಿಂದ ಶನಿವಾರ ವಿಜಯದಶಮಿ ಅಂಗವಾಗಿ ಬನ್ನಿಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕುವೆಂಪುನಗರದಲ್ಲಿರುವ ಉತ್ತರ ಕನ್ನಡ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಪ್ಪ ಕ.ಲಾಳಿ ಉದ್ಘಾಟಿಸಿ, ಉದ್ಯೋಗ, ವ್ಯಾಪರ ಸೇರಿದಂತೆ ಇನ್ನಿತರ ಕಾರಣಗಳಿಂದ ಮೈಸೂರಿಗೆ ಬಂದು ನೆಲೆಸಿದ್ದರೂ ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ, ಭಾಷೆಯನ್ನು ಉಳಿಸಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದರು.

ಎಲ್ಲರೂ ಒಂದೆಡೆ ಕಲೆತು ವಿಜಯದಶಮಿಯಲ್ಲಿ ಪರಸ್ಪರ ಬನ್ನಿಕೊಟ್ಟು ಶುಭ ಕೋರುವ ಮೂಲಕ ಸ್ನೇಹ, ಸಂಬಂಧವನ್ನು ಗಟ್ಟಿಗೊಳಿಸುವ ಈ ಸಂಪ್ರದಾಯ ಮುಂದುವರಿದುಕೊಂಡು ಹೋಗಲಿ. ಇಷ್ಟು ಕಾರ್ಯಕ್ರಮಗಳನ್ನು ಸಂಘದಿಂದ ಆಚರಿಸಿಕೊಂಡು ನಮ್ಮತನವನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳೋಣ ಎಂದು ಹೇಳಿದರು.

ಸಂಘದ ಅಧ್ಯಕ್ಷ ಪಿ.ವಿ.ಅವರಾದಿ ಮಾತನಾಡಿ, ಉತ್ತರ ಕರ್ನಾಟಕದ ವಿವಿಧ ಭಾಗದಿಂದ ಬಂದು, ನಗರದಲ್ಲಿ ನೆಲೆಸಿರುವವರು ಒಂದೆಡೆ ಸೇರಿ ಪ್ರತಿ ವರ್ಷ ಬನ್ನಿಪೂಜೆ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲೇ ಇದ್ದರೂ ನಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇದರ ಉದ್ದೇಶ ಎಂದರು.

ಈ ಹಬ್ಬ ಆಚರಣೆ ಮೂಲಕ ಎಲ್ಲ ವೈಮನಸ್ಸು, ವೈಷಮ್ಯವನ್ನು ಮರೆತು ಪರಸ್ವರ ಪ್ರೀತಿ, ವಿಶ್ವಾಸದಿಂದ ಇರೋಣ ಎಂದು ಆರೈಸುವ ಈ ಸಂಪ್ರದಾಯ ನಮ್ಮ ಮಕ್ಕಳಿಗೂ ತಿಳಿಯಬೇಕು. ಈ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಡಾ. ಬಸವರಾಜ ಸಾಗರ್, ಕಾರ್ಯಾಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್, ವಿಆರ್‌ಎಲ್ ಪ್ರಧಾನ ವ್ಯವಸ್ಥಾಪಕ ಅಶೋಕ್ ಬಿ.ಯಂಡಿಗೇರಿ, ಸಂಘದ ಪ್ರಧಾನ ಕಾರ್ಯದರ್ಶಿ ಶಿವನಾಯ್ಕ, ಪದಾಧಿಕಾರಿಗಳಾದ ರಾಜಶೇಖರ ಜವಳಗಿ, ಗುರುರಾಜ ಹೊಸಮನಿ ಇತರರು ಇದ್ದರು.

ಬಳಿಕ ಜೂನಿಯರ್ ಪ್ರಾಣೇಶ್ ಖ್ಯಾತಿಯ ಬಿಇಎಂಎಲ್ ಕಂಪ್ಲಪ್ಪ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು.