ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ

ಪಾಲಿಕೆ-ಅಂಚೆ ಇಲಾಖೆ ನಡುವೆ ಒಪ್ಪಂದ ಕಚೇರಿಗೆ ಪದೇ ಪದೆ ಅಲೆಯುವುದಕ್ಕೆ ಬ್ರೇಕ್ ಆಯುಕ್ತೆ ಎಂ.ಕೆ.ಸವಿತಾ, ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ಪರಸ್ಪರ ಸಹಿ ಸಾರ್ವಜನಿಕರ ವಿಳಾಸಕ್ಕೆ ತಲುಪಿಸಲು ಕ್ರಮ
ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ
ಜನನ ಮತ್ತು ಮರಣ ಪ್ರಮಾಣಪತ್ರಯನ್ನು ಅರ್ಜಿದಾರ ಮನೆ ಬಾಗಿಲಿಗೆ ತಲುಪಿಸಲು ಪಾಲಿಕೆ ಮತ್ತು ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ. ಎಂ.ಕೆ.ಸವಿತಾ, ಜಿ. ಹರೀಶ್, ಮಣಿಕುಮಾರ್, ಡಾ. ಸುರೇಶ್ ಕುಮಾರ್ ಇನ್ನಿತರರಿದ್ದರು.Birth and Death Certificates at Your Doorstep
Published on: 

ಮೈಸೂರು: ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪದೇ ಪದೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆ ಮಾಡುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಮತ್ತು ಭಾರತೀಯ ಅಂಚೆ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ವ್ಯವಸ್ಥೆಯಡಿ ಪಾಲಿಕೆಯಿಂದ ನೀಡಲಾಗುವ ಪ್ರಮಾಣಪತ್ರಗಳನ್ನು ಸಾರ್ವಜನಿಕರು ಸೂಚಿಸುವ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಲಾಗುತ್ತದೆ.

ಪಾಲಿಕೆಯ ಚಾಮರಾಜೇಂದ್ರ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತೆ ಎಂ.ಕೆ.ಸವಿತಾ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಯೋಜನೆಯ ಕಾರ್ಯವಿಧಾನ, ಸಾರ್ವಜನಿಕರಿಗೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.

ಈ ಸೌಲಭ್ಯವು ಪಾಲಿಕೆಯ ಮುಖ್ಯ ಕಚೇರಿ ಹಾಗೂ ಎಲ್ಲ 9 ವಲಯ ಕಚೇರಿಗಳಲ್ಲಿ ಲಭ್ಯ. ಅಂಚೆ ಮೂಲಕ ಪ್ರಮಾಣಪತ್ರ ಪಡೆಯಲು ಬಯಸುವವರು, ಜನನ ಅಥವಾ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಪ್ಪಿಗೆ ಪತ್ರದೊಂದಿಗೆ ಪ್ರಮಾಣಪತ್ರ ತಲುಪಿಸಬೇಕಾದ ಪೂರ್ಣ ವಿಳಾಸ ನೀಡಬೇಕು. ಸಿದ್ಧವಾದ ಪ್ರಮಾಣಪತ್ರವನ್ನು ಅಂಚೆ ಇಲಾಖೆಯ ವ್ಯಾಪಕ ಜಾಲದ ಮೂಲಕ ದೇಶದ ಯಾವುದೇ ಭಾಗದಲ್ಲಿರುವ ನಿಗದಿತ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಕ್ಯಾಷ್ ಆನ್ ಡೆಲಿವರಿ ವ್ಯವಸ್ಥೆಯಡಿ ಪ್ರಮಾಣಪತ್ರವನ್ನು ಸ್ವೀಕರಿಸುವ ಸಂದರ್ಭದಲ್ಲಿ ಸಾರ್ವಜನಿಕರು 100 ರೂ. ಅಂಚೆ ವಿತರಣಾ ಶುಲ್ಕವನ್ನು ಅಂಚೆ ಸಿಬ್ಬಂದಿಗೆ ಪಾವತಿಸಬೇಕು. ಈ ವ್ಯವಸ್ಥೆಯಿಂದ ಅರ್ಜಿ ಸಲ್ಲಿಸಿದ ನಂತರ ಪ್ರಮಾಣಪತ್ರ ಪಡೆದುಕೊಳ್ಳಲು ಸಾರ್ವಜನಿಕರು ಮತ್ತೊಮ್ಮೆ ಪಾಲಿಕೆ ಕಚೇರಿಗೆ ಭೇಟಿ ನೀಡುವ ಅಗತ್ಯ ತಪ್ಪಲಿದ್ದು, ಅವರ ಸಮಯ, ಪ್ರಯಾಣ ವೆಚ್ಚ, ಶ್ರಮ ಉಳಿತಾಯವಾಗಲಿದೆ.

ಅಂಚೆ ಇಲಾಖೆಯ ಮಣಿಕುಮಾರ್, ಎಎಸ್‌ಎಪಿ, ಮಾರ್ಕೆಟಿಂಗ್ ಅಧಿಕಾರಿ ಡಾ. ಸುರೇಶ್ ಕುಮಾರ್, ಖಾಸಗಿ ಆಸ್ಪತ್ರೆಗಳ ಅಧ್ಯಕ್ಷರಾದ ಡಾ. ಚಂದ್ರಶೇಖರ್, ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಮೃತ್ಯುಂಜಯ, ಸಹಾಯಕ ಸಾಂಖ್ಯಿಕ ಅಧಿಕಾರಿ ಶಂಕರ್, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.