ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ: ಪ್ರಧಾನಿ ಮೋದಿ ಬಣ್ಣನೆ

ಆಧುನಿಕ ಕಾಸ್ಮೋಸ್ ತಾರಾಲಯ ಉದ್ಘಾಟನೆ ಯುವಜನರಿಗೆ ಹೊಸ ಅವಕಾಶ ಸೃಷ್ಟಿ
ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ:  ಪ್ರಧಾನಿ ಮೋದಿ ಬಣ್ಣನೆ
ಆಧುನಿಕ ಕಾಸ್ಮೋಸ್ ತಾರಾಲಯ ಉದ್ಘಾಟನಾ ಕಾರ್ಯಕ್ರಮA new chapter for India's scientific journey: PM Modi says
Published on: 

ಮೈಸೂರು: ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ, ತಂತ್ರಜ್ಞಾನ ಅಭಿವೃದ್ಧಿ ಮಾಡುವುದರೊಂದಿಗೆ ಯುವಜನರಿಗೆ ಹೊಸ ಅವಕಾಶ ಸೃಷ್ಟಿಸುವುದೇ ನವಭಾರತದ ವೈಜ್ಞಾನಿಕ ದೃಷ್ಟಿಕೋನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಆಧುನಿಕ ಕಾಸ್ಮೋಸ್ ತಾರಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ವಿಜ್ಞಾನ, ಸಂಶೋಧನೆಗೆ ಪೂರಕವಾದ ಬಲಿಷ್ಠ ವ್ಯವಸ್ಥೆ ರೂಪುಗೊಳ್ಳುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಯುವ ಜನರಲ್ಲಿ ಕುತೂಹಲ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸುವುದು ಮುಖ್ಯ. ಈ ನಿಟ್ಟಿನಲ್ಲಿ ತಾರಾಲಯಗಳು, ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಸಾಧನೆ ಮಾಡುತ್ತಿರುವ ಸಂದರ್ಭದಲ್ಲಿ ಅತ್ಯಾಧುನಿಕ ತಾರಾಲಯದ ಮೂಲಕ ಮೈಸೂರು ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ ಎಂದರು.

ಭಾರತದ ಮೊದಲ ಎಲ್‌ಇಡಿ ಡೋಮ್ ತಾರಾಲಯವಾಗಿರುವ ಇದು ಯುವಜನರು, ದೇಶವಾಸಿಗಳಿಗೆ ಸಮರ್ಪಿತವಾಗುತ್ತಿದೆ. ತಾರಾಲಯದಲ್ಲಿ ಪ್ರದರ್ಶಿಸಲಾದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ನನಗೂ ದೊರೆಯಿತು. ಇದು ಅತ್ಯಂತ ಅದ್ಭುತ ಅನುಭವ ನೀಡಿತು ಎಂದು ನುಡಿದರು.

ಯುವಜನರಿಗೆ ಸೂಕ್ತ ಅವಕಾಶ, ಕಲಿಕೆಗೆ ಅಗತ್ಯವಾದ ಸಂಪನ್ಮೂಲ, ತಂತ್ರಜ್ಞಾನ ಒದಗಿಸಿದರೆ ಅವರು ದೊಡ್ಡ ಸಾಧನೆ ಮಾಡಬಲ್ಲರು. ತಾರಾಲಯವು ಯುವಜನರ ಕನಸುಗಳಿಗೆ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದೂ ಹೇಳಿದರು.

ಒಂದು ದಶಕದಲ್ಲಿ ಭಾರತವು ಖಗೋಳ, ಭೌತಶಾಸ್ತ್ರ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಬಾಹ್ಯಾಕಾಶ ಸಂಶೋಧನೆಯ ಹಲವು ಕಠಿಣ ಕ್ಷೇತ್ರಗಳಲ್ಲಿ ಭಾರತ ಇಂದು ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದರು.

ಭಾರತದ ಪೂರ್ವಜರು ಆಕಾಶವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ನಕ್ಷತ್ರಗಳು, ಗ್ರಹಗಳ ಚಲನೆಯನ್ನು ಅರ್ಥ ಮಾಡಿಕೊಂಡು ಪಂಚಾಂಗ ರೂಪಿಸಿದ್ದರು. ಸೂರ್ಯ, ಚಂದ್ರಗ್ರಹಣಗಳ ಸಮಯವನ್ನು ನಿಖರವಾಗಿ ಲೆಕ್ಕ ಹಾಕುತ್ತಿದ್ದರು. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯನಂತಹ ಖಗೋಳ ವಿಜ್ಞಾನಿಗಳು ದೇಶಕ್ಕೆ ಹಿರಿಮೆ ತಂದರು. ಈಗಿನಂತೆ ಅತ್ಯಾಧುನಿಕ ಉಪಕರಣಗಳು, ತಂತ್ರಜ್ಞಾನಗಳಿಲ್ಲದ ಕಾಲದಲ್ಲೇ ಅವರು ಮಹತ್ವದ ಸಂಶೋಧನೆ ನಡೆಸಿ, ಸಂಕೀರ್ಣ ಗಣಿತದ ಲೆಕ್ಕಾಚಾರ ಮಾಡಿ ಸಾಧನೆ ಮಾಡಿದರು ಎಂದು ಸ್ಮರಿಸಿದರು.

ಜ್ಞಾನ, ಸಂಶೋಧನೆಗೆ ಉತ್ತೇಜನ ನೀಡುವ ಸಂಸ್ಥೆಗಳನ್ನು ನಿರ್ಮಿಸುವ ಪರಂಪರೆ ಮೈಸೂರಿನಲ್ಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು. ಈ ಸಂಸ್ಥೆಗಳು ಹಲವು ತಲೆಮಾರುಗಳ ವಿದ್ಯಾರ್ಥಿಗಳು, ಸಂಶೋಧಕರಿಗೆ ಅವಕಾಶ ಕಲ್ಪಿಸಿವೆ ಎಂದು ಹೇಳಿದರು.

ಜೈ ಅನುಸಂಧಾನ ಘೋಷಣೆ ಸೇರ್ಪಡೆ:

ದೇಶದಲ್ಲಿ ಬಹುಕಾಲದಿಂದ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಚಾಲ್ತಿಯಲ್ಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದಕ್ಕೆ ‘ಜೈ ವಿಜ್ಞಾನ್’ ಸೇರಿಸಿದರು. ನಾನು ‘ಜೈ ಅನುಸಂಧಾನ್’ ಎಂಬ ಘೋಷಣೆ ಸೇರ್ಪಡೆಗೊಳಿಸಿದೆ. 21ನೇ ಶತಮಾನದ ಭಾರತ ಇದೇ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ. ಈ ಪಯಣದಲ್ಲಿ ದೇಶದ ಯುವಜನರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ನರೇಂದ್ರ ಮೋದಿ ಶ್ಲಾಸಿದರು.

ಅಂತಾರಾಷ್ಟ್ರೀಯ ಖಗೋಳ, ಭೌತಶಾಸ್ತ್ರ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ದೇಶದ ಯುವಜನರು ಉತ್ಸಾಹದಿಂದ ಭಾಗವಹಿಸಿ ಸಾಧನೆ ಮಾಡಿದ್ದು, ವಿಯೆಟ್ನಾಂನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರು ಚಿನ್ನ, ಒಬ್ಬರು ಬೆಳ್ಳಿ ಪದಕ ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದರು.

ವಿಜ್ಞಾನ, ಸಂಶೋಧನಾ ಕ್ಷೇತ್ರವನ್ನು ಬಲಪಡಿಸಲು ಹಲವು ಮಹತ್ವದ ಉಪಕ್ರಮ ಜಾರಿಗೊಳಿಸಿದೆ. ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ಈವರೆಗೆ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಸ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸಲು, ಪ್ರಯೋಗ ನಡೆಸಲು ಹಾಗೂ ನಾವೀನ್ಯತೆ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮೋದಿ ತಿಳಿಸಿದರು.

ಸಂಶೋಧನೆಗೆ ಉತ್ತೇಜನ ನೀಡಲು ವಿದ್ಯಾರ್ಥಿಗಳು, ಸಂಶೋಧಕರಿಗೆ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಸಂಶೋಧನಾ ಪ್ರಕಟಣೆಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಯೋಜನೆ’ ಶುರು ಮಾಡಲಾಗಿದೆ. ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳಿಗೆ ಜಾಗತಿಕ ಮಟ್ಟದ ಪ್ರಮುಖ ವೈಜ್ಞಾನಿಕ ನಿಯತಕಾಲಿಕೆ ಸುಲಭವಾಗಿ ಅಧ್ಯಯನ ಮಾಡಲು ನೆರವಾಗಲಿದೆ ಎಂದರು.

ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ‘ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಷನ್’ ಸ್ಥಾಪಿಸಲಾಗಿದೆ. ಇದರ ಮೂಲಕ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಶೋಧನೆಗಳಿಗೆ ನೆರವು ನೀಡಲಾಗುತ್ತಿದೆ. ಕಳೆದ ವರ್ಷ ಒಂದು ಲಕ್ಷ ಕೋಟಿ ರೂ. ಮೊತ್ತದ ಸಂಶೋಧನೆ, ಅಭಿವೃದ್ಧಿ, ನಾವೀನ್ಯತಾ ಯೋಜನೆಯನ್ನೂ ಆರಂಭಿಸಲಾಗಿದ್ದು, ಸಂಶೋಧಕರಿಗೆ ಅಗತ್ಯವಾದ ಆರ್ಥಿಕ ನೆರವು ಕಲ್ಪಿಸಲಾಗಿದೆ. ಜತೆಗೆ ನವ ತಂತ್ರಜ್ಞಾನಗಳನ್ನು ಪ್ರಯೋಗಾಲಯಗಳಿಂದ ಪ್ರಾಯೋಗಿಕ ಬಳಕೆಗೆ ತರುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಕನ್ನಡದಲ್ಲೇ ಭಾಷಣ ಶುರು

‘ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಶುರು ಮಾಡಿದ ಪ್ರಧಾನಿ, ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು.

‘ಮೈಸೂರಿಗೆ ಮತ್ತೊಮ್ಮೆ ಆಗಮಿಸಿರುವುದು ಸಂತಸ ತಂದಿದೆ. ಕೆಲವು ತಿಂಗಳ ಹಿಂದೆಯಷ್ಟೇ ವಿವೇಕಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೆ. ಇಂದು ತಾರಾಲಯವನ್ನು ರಾಷ್ಟಕ್ಕೆ ಸಮರ್ಪಿಸುವ ಅವಕಾಶ ದೊರೆತಿದೆ’ ಎಂದರು.

ಈ ಎರಡೂ ಸಂದರ್ಭಗಳು ಭಾರತದ ಸಂಸ್ಕಾರ, ಸಂಸ್ಕೃತಿಯ ಕುರಿತು ಆಳವಾದ ಸಂದೇಶ ನೀಡುತ್ತವೆ. ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಪ್ರೇರಣೆ ನೀಡಿದ್ದರೆ, ತಾರಾಲಯಕ್ಕೆ ಆಕಾಶ ಕುತೂಹಲ ಅರಿಯಲು ಉತ್ತೇಜಿಸುತ್ತದೆ ಎಂದರು.