ಬಾರ್ ಬಿಲ್ ಕಟ್ಟುವ ವಿಚಾರದ ಗಲಾಟೆಯಲ್ಲಿ ಕೊಲೆ

ಮರದ ಪಟ್ಟಿಯಿಂದ ಹಲ್ಲೆ ನಡೆಸಿ ಹತ್ಯೆ
Murder during a dispute over paying a bar bill
ಕ್ರೈಮ್
Published on: 

ಮೈಸೂರು:ಮದ್ಯಪಾನ ಮಾಡಿದ ಬಳಿಕ ಹಣ ನೀಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯ ಕೊಲೆಯಾಗಿದೆ.

ಅಶೋಕಪುರಂನ ಮಹೇಶ್ (47) ಮೃತ. ಕೊಲೆ ಆರೋಪಿ ನಂದೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಎಲ್‌ಐಸಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮಹೇಶ್, ಕುಡಿತದ ಚಟಕ್ಕೆ ದಾಸನಾಗಿದ್ದ. ಇದೇ ವಿಚಾರವಾಗಿ ಕುಟುಂಬದಲ್ಲಿ ಆಗಾಗ್ಗೆ ಗಲಾಟೆ ನಡೆದು ಪತ್ನಿಯನ್ನು ಮದ್ದೂರಿನಲ್ಲಿ ಬಿಟ್ಟು, ಮೈಸೂರಿನಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.

ವಿದ್ಯಾರಣ್ಯಪುರಂನ ಬಾರ್‌ವೊಂದರಲ್ಲಿ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಪರಿಚಿತ ನಂದೀಶ್ ಸೇರಿದಂತೆ ಆತನ ಮೂವರು ಸ್ನೇಹಿತರ ಜತೆಯಲ್ಲಿಯೇ ಕುಡಿದು ಅಂತಿಮವಾಗಿ ಮಹೇಶ್‌ಗೆ ಬಿಲ್ ಕೊಡುವಂತೆ ಹೇಳಿದ್ದಾರೆ. ಈ ವೇಳೆ ಜಗಳವಾಗಿದೆ. ಮಹೇಶ್ ಬಾರ್‌ನಿಂದ ಹೊರಟು ಮನೆ ಕಡೆ ಹೊರಟಾಗ ಹಿಂಬಾಲಿಸಿಕೊಂಡು ಬಂದ ನಂದೀಶ್ ಹಾಗೂ ಆತನ ಸ್ನೇಹಿತರು ವಿದ್ಯಾರಣ್ಯಪುರಂ ಬಳಿ ಮರದ ಪಟ್ಟಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ಆರೋಪಿ ನಂದೀಶ್‌ನನ್ನು ಬಂಧಿಸಿದ್ದು, ಇತರ ಆರೋಪಿಗಳ ಪತ್ತೆ ಕಾರ್ಯ ನಡೆಸಿದ್ದಾರೆ.