ಮೈಸೂರು: ನಗರದ ದೊಡ್ಡ ಗಡಿಯಾರದ ಬಳಿ ಸ್ಕೂಟರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎನ್.ಆರ್.ಮೊಹಲ್ಲಾದ ಮಾರುತಿ ವೃತ್ತದ ನಿವಾಸಿ ವೆಂಕಟೇಶ್ ನಾಯಕ್ ಮತ್ತು ಜ್ಯೋತಿ ದಂಪತಿಯ ಏಕೈಕ ಪುತ್ರಿ ವಿ.ವೈಷ್ಣವಿ (17) ಮೃತ ದುರ್ದೈವಿ.
ವೈಷ್ಣವಿ ಸದ್ವಿದ್ಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಟ್ಯೂಷನ್ಗಾಗಿ ಬೆಳಗ್ಗೆ 7.30ರ ಹೊತ್ತಿಗೆ ತಂದೆಯೊಂದಿಗೆ ಸ್ಕೂಟರ್ನಲ್ಲಿ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಸ್, ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಈ ರಭಸಕ್ಕೆ ತಂದೆ-ಮಗಳಿಬ್ಬರೂ ರಸ್ತೆಗೆ ಬಿದ್ದಿದ್ದು, ಬಸ್ ಚಕ್ರ ವೈಷ್ಣವಿಯ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆಯ ಎಡಗೈಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ದೇವರಾಜ ಸಂಚಾರ ಠಾಣೆ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ರವಾನಿಸಿದರು.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಸ್ ಮತ್ತು ಸ್ಕೂಟರ್ ಎರಡನ್ನೂ ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.