

ಹುಣಸೂರು: ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಾ. ಬಿ.ಆರ್.ಅಂಬೇಡ್ಕರ್‌ನಗರ ಬಡಾವಣೆಯಲ್ಲಿ ವಾಸವಿರುವ ನಿರ್ಗತಿಕ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ಕಲೀಂ ಅಹಮದ್ ಅವರಿಗೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೊಮವಾರ ಮನವಿ ಸಲ್ಲಿಸಲಾಯಿತು.
ಸೆಸ್ಕ್ ಇಇ ಕಚೇರಿಯಲ್ಲಿ ಬಡಾವಣೆ ನಿವಾಸಿಗಳೊಂದಿಗೆ ಮನವಿ ಸಲ್ಲಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಅಂಬೇಡ್ಕರ್‌ನಗರದಲ್ಲಿ 80 ವಿವಿಧ ಜಾತಿಗೆ ಸೇರಿದ ಬಡ ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳ ಮನೆಗಳನ್ನು ಕಟ್ಟಿಕೊಂಡು ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿದ್ದು, ಈ ಪೈಕಿ 7 ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲೇ ಜೀವನ ಕಳೆಯುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಬೆಳಕಿಲ್ಲದೆ ತುಂಬ ತೊಂದರೆಯಾಗಿರುತ್ತದೆ. ರಾತ್ರಿ ವೇಳೆಯಲ್ಲಿ ಬೆಳಕಿಲ್ಲದೆ ಅನೇಕ ರೀತಿಯ ತೊಂದರೆಯನ್ನು ಪಡುತ್ತಿದ್ದಾರೆ. ಈ ಸಂಬಂಧ ಸಮಿತಿ ವತಿಯಿಂದ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಎನ್‌ಓಸಿ ಕೊಡುವಂತೆ ಕೇಳಲಾಗಿತ್ತು. ಅದರಂತೆ ಪಂಚಾಯಿತಿಯ ಕಾರ್ಯದರ್ಶಿಗಳು ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ನಿರಾಕ್ಷೇಪಣಾ ಪತ್ರ ಸಹ ಕೊಟ್ಟಿರುತ್ತಾರೆ. ಆದರೆ ಸೆಸ್ಕ್ ಅಧಿಕಾರಿಗಳು ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಾ ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಪ್ರಜಾ ಸೇವಾ ಅಹವಾಲು ಸಭೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಭೆಯಲ್ಲಿ ಸಚಿವರು ಮತ್ತು ಶಾಸಕರ ಸೂಚನೆ ಮೇರೆಗೆ ಸೆಸ್ಕ್ ಇಂಜಿನಿಯರುಗಳು ಮನೆಗಳಿಗೆ ತೆರಳಿ ಇರುವ ದಾಖಲೆಗಳನ್ನು ಪರಿಗಣಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತೇನೆಂದು ಹೇಳಿ ಇದೀಗ ನಿರಾಕರಿಸುತ್ತಿದ್ದಾರೆ. ಈ ಕೂಡಲೇ ಸಚಿವರ ಮತ್ತು ಶಾಸಕರ ಸೂಚನೆಯಂತೆ ಇರುವ ದಾಖಲೆಗಳನ್ನು ಪರಿಗಣಿಸಿ 7 ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಮಲ್ಲಿಕ್ ಪಾಷ, ರಾಮನಾಯಕ, ಚಂದ್ರನಾಯ್ಕ, ಮಂಜುಳಮ್ಮ, ಅಂಬೇಡ್ಕರ್ ನಗರದ ದಾಸಪ್ಪ, ಶೋಭಮ್ಮ, ಮಣಿ, ಮಲ್ಲಿಕಾ, ಕುಮಾರ, ಕಸ್ತೂರಿ, ಮಾಲ, ಜಾನು ಮುಂತಾದವರು ಹಾಜರಿದ್ದರು.