ಪ್ರೊ.ಜಿ.ಎಸ್.ಜಯದೇವ ಅವರಿಗೆ ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ

ಬತ್ತದ ಉತ್ಸಾಹದ ಚಿಲುಮೆ ಪ್ರೊ.ಗುರುಸ್ವಾಮಿ: ಲೇಖಕ ಪ್ರೊ.ಜಿ.ಎಸ್.ಜಯದೇವ ಬಣ್ಣನೆ
ಪ್ರೊ.ಜಿ.ಎಸ್.ಜಯದೇವ ಅವರಿಗೆ  ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ
ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನದಿಂದ ನೀಡುವ ಪ್ರಸ್ತಕ ಸಾಲಿನ ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನProf. Maleyuru Guruswamy award to Prof. G. S. Jayadeva
Published on: 

ಮೈಸೂರು: ಪ್ರೊ.ಗುರುಸ್ವಾಮಿ ಅವರೊಂದಿಗೆ ಕೆಲಸ ಮಾಡಿದ್ದರಿಂದ ಉತ್ತಮ ಒಡನಾಟವೂ ಇತ್ತು. ಒಟ್ಟಿಗೆ ಪ್ರವಾಸ ಮಾಡಿ ವಿವಿಧ ಊರುಗಳನ್ನೂ ಸುತ್ತಿದ್ದವು. ಅವರ ಹೆಸರಿನ ಪ್ರಶಸ್ತಿ ಪಡೆಯುವಾಗ ಸಂತೋಷ, ಸಂಕೋಚಗಳೆರಡೂ ಆಗುತ್ತಿದೆ ಎಂದು ಚಾಮರಾಜನಗರದ ದೀನಬಂಧು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಲೇಖಕ ಪ್ರೊ.ಜಿ.ಎಸ್.ಜಯದೇವ ಹೇಳಿದರು.

ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನದಿಂದ ನೀಡುವ ಪ್ರಸ್ತಕ ಸಾಲಿನ ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರೊ.ಗುರುಸ್ವಾಮಿ ಅವರೊಬ್ಬ ಬತ್ತದ ಉತ್ಸಾಹದ ಚಿಲುಮೆ. ಸಾಂಸ್ಕೃತಿಕ ಅಭಿಮಾನಿ, ಸ್ಪಷ್ಟ ತಿಳಿವಳಿಕೆ ಅವರಲ್ಲಿತ್ತು. ಹೀಗಾಗಿಯೇ ಸಾಂಸ್ಕೃತಿಕ ನಾಯಕತ್ವ ವಹಿಸಿಕೊಂಡು ಉತ್ತಮ ಸಂಘಟಕರಾಗಿ ಕೆಲಸ ಕಾರ್ಯ ಮಾಡಿದ್ದರು.

ಶಾಸನ ಸಾಹಿತ್ಯದ ಕುರಿತು ಕೆಲಸ ಮಾಡಿದ್ದ ಅವರು, ಶೋಷಿತರ, ದಲಿತರ, ನೊಂದವರ ಪರವಾಗಿ ದುಡಿದರು. ಅವರ ಕುರಿತು ವಿದ್ಯಾರ್ಥಿಗಳಿಗೆ ಅಭಿಮಾನದ ಒಲವು ಇತ್ತು. ಅವರು ಸಹ ತಮ್ಮ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸಿದ್ದರು. ಸಾಹಿತ್ಯ, ಸಾಂಸ್ಕೃತಿಕ, ಸಂಸ್ಕೃತಿ ಕಾಳಜಿ ಹೊಂದಿದ್ದರಲ್ಲದೆ, ಇವುಗಳು ಸಮಾಜದಲ್ಲಿ ಮುಂದುವರಿಯುವ ಮೂಲಕ ಜನಸಮೂಹವನ್ನು ಜಾಗೃತಗೊಳಿಸಬೇಕೆಂಬ ಅಭಿಲಾಷೆಯನ್ನೂ ಹೊಂದಿದ್ದರು ಎಂದು ಹೇಳಿದರು.

ಹಳೇ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಅಧ್ಯಯನ, ಅಧ್ಯಾಪನ, ಭಾಷಣ, ಬರಹಗಳಿಂದಲೇ ಖ್ಯಾತರಾಗಿದ್ದರು. ತಮ್ಮ ಮಾತಿನ ಶೈಲಿಯಿಂದ ಸಾಹಿತ್ಯ, ಚರಿತ್ರೆ, ಭೂಗೋಳ, ಜಾನಪದ ಮುಂತಾದವುಗಳ ಕುರಿತು ನಡೆದಾಡುವ ಸಾಂಸ್ಕೃತಿಕ ವಿಶ್ವಕೋಶದಂತಿದ್ದರು.

ತಮ್ಮ ಸಾಹಿತ್ಯ ಕೃಷಿಯಲ್ಲಿ ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ, ಸಮಕಾಲೀನ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಅವರ ಕೃತಿಗಳು ಸಮಾನತೆಯ ಬೇರುವುಳ್ಳ ಬದುಕಿನ ಆಳವನ್ನು ಶೋಧಿಸುವ, ಇತಿಹಾಸದ ಎಳೆಗಳೊಂದಿಗೆ ಪ್ರಸ್ತುತತೆಯನ್ನು ಸಮೀಕರಿಸುತ್ತಿದ್ದರು. ಈ ಮುಖೇನ ಮನುಷ್ಯ ಪ್ರಜ್ಞೆಯನ್ನು ವಿಸ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದ ಅಭಿಮಾನದಿಂದ ಹೇಳಿದರು. ಪ್ರತಿಷ್ಠಾನದ ಗೌರವಾಧ್ಯಕ್ಷೆ, ನಿವೃತ್ತ ಉಪನ್ಯಾಸಕಿ ಕೆ.ಎಸ್.ಜಯಂತಿ ಇದ್ದರು.