ನೋಡಲು ಬನ್ನಿ ಮೈಸೂರು ದಸರಾ ದರ್ಬಾರ...!

ನಾಡಹಬ್ಬಕ್ಕೆ ಇಂದು ಚಾಲನೆ ಮೈಸೂರಿನಲ್ಲಿ 11 ದಿನ ನವೋಲ್ಲಾಸ ಸಡಗರ
ನೋಡಲು ಬನ್ನಿ ಮೈಸೂರು ದಸರಾ ದರ್ಬಾರ...!
ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ದಸರಾ ಸಿದ್ಧತೆCome and witness the Mysore Dasara Durbar...!
Published on: 

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಶಕ್ತಿ-ಭಕ್ತಿಯ ಸುಂದರ ಸಮ್ಮಿಲನವಾಗಿರುವ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಕದ ಪರದೆ ಭಾನುವಾರ ಗರಿಬಿಚ್ಚಲಿದೆ...!

ಬರಗಾಲ ನಡುವೆಯೂ ನಾಡಹಬ್ಬಕ್ಕಾಗಿ ಸಾಂಸ್ಕೃತಿಕ ನಗರಿ ಅದ್ದೂರಿಯಾಗಿ ಸಜ್ಜಾಗುತ್ತಿದೆ. ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಅನ್ನದಾತ ಸಂಕಷ್ಟದಲ್ಲಿರುವಾಗಲೇ ದಸರೆ ವಿಜೃಂಭಿಸುತ್ತಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಇಡೀ ಅರಮನೆ ನಗರಿಯೇ ದೀಪಾಲಂಕಾರಗಳಿಂದ ಥಳಥಳಿಸುತ್ತಿದೆ.

ನಗರದ ವಿವಿಧೆಡೆ ಕೊಣೇ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲೂ ಸಕಲ ತಯಾರಿ ಪೂರ್ಣಗೊಂಡಿದ್ದು, ಅ.11ರಂದು ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ದಸರೆಗೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾಂಪ್ರದಾಯಿಕವಾಗಿ ಚಾಲನೆ ನೀಡುವರು. ಬಳಿಕ ಸಾಲು ಸಾಲು ದಸರಾ ಚಟುವಟಿಕೆ ಗರಿಬಿಚ್ಚಿ ಮುಂದಿನ 11 ದಿನಗಳವರೆಗೆ ನವೋಲ್ಲಾಸ ಎಲ್ಲೆಡೆ ಪಸರಿಸಲು ತುದಿಗಾಲ ಮೇಲೆ ನಿಂತಿದೆ.

ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರಿಗೆ ಇದು ಮೊದಲ ದಸರೆ. ಹೀಗಾಗಿ, ಹೆಚ್ಚಿನ ಆಸಕ್ತಿ, ಒಲವು ತೋರಿರುವ ಅವರು, ಇಡೀ ಸರ್ಕಾರವನ್ನೇ ದಸರಾ ನಿರ್ವಹಣೆಗೆ ನಿಯೋಜಿಸಿರುವುದು ಈ ಸಲದ ವಿಶೇಷ. ರಾಜ್ಯದ ಅನೇಕ ಮಠದ ಸುಮಾರು 200 ಸ್ವಾಮೀಜಿಗಳು ದಸರಾ ಉದ್ಘಾಟನೆಗೆ ಸಾಕ್ಷಿಯಾಗುತ್ತಿರುವುದು ಈ ಸಲ ಮತ್ತೊಂದು ವೈಶಿಷ್ಟೃ.

ದಸರೆಯ ಆಡಂಬರಕ್ಕಿಲ್ಲ ಬರ. ಕ್ಷಾಮದ ನಡುವೆಯೂ ಎಲ್ಲೆಡೆಯೂ ಅದ್ದೂರಿತನ ಕಣ್ಣಿಗೆ ರಾರಾಜಿಸುತ್ತಿದೆ. ವೈವಿಧ್ಯಮಯ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲು ತಯಾರಾಗುತ್ತಿದೆ.

ಮೊದಲ ಬಾರಿಗೆ ಕಂಬಳ:

ಸಾರ್ವಜನಿಕರ ವಿರೋಧ ನಡುವೆ ಮೊದಲ ಬಾರಿಗೆ ದಸರಾದಲ್ಲಿ ಕರಾವಳಿಯ ಕಂಬಳ ಕ್ರೀಡೆ ಮೇಳೈಸಲಿದೆ. ಅ.18, 19ರಂದು ನಡೆಯುವ ಇದರಲ್ಲಿ ಹಿರಿಯ ದರ್ಜೆಯ ಸುಮಾರು 150ರಿಂದ 160 ಜೋಡಿ ಕೋಣಗಳ ಓಟದ ರೋಚಕತೆ ಕಣ್ತುಂಬಿಕೊಳ್ಳಬಹುದು. ನಗರದ ರಿಂಗ್ ರಸ್ತೆಯ ಸಾತಗಳ್ಳಿ ಸಮೀಪ 145 ಮೀಟರ್ ಉದ್ದದ ಟ್ರ್ಯಾಕ್ ಸಹ ನಿರ್ಮಿಸಲಾಗಿದೆ. ಎರಡು ದಿನ ಕಾರ್ಯಕ್ರಮಕ್ಕಾಗಿ ಬರೋಬ್ಬರಿ ಅಂದಾಜು 8 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಸಾಂಸ್ಕೃತಿಕ ವೈಭವ:

ವಿಶಿಷ್ಟ ಸಾಂಸ್ಕೃತಿಕ ಪ್ರಪಂಚವೇ ಅನಾವರಣಗೊಳ್ಳಲಿದ್ದು, ಪ್ರಮುಖ ವೇದಿಕೆಯಾದ ಅರಮನೆ ಅಂಗಳದಲ್ಲಿ ಶಾಸ್ತ್ರೀಯ ಸಂಗೀತ ಸುಧೆ ಹರಿಯಲಿದೆ. ಈ ಸಲ ಚಲನಚಿತ್ರೋತ್ಸವ ಕೈಬಿಡಲಾಗಿದೆ.

ದಸರೆಯಲ್ಲಿ ಈ ಸಲವೂ ವಿವಿಧ ಕಾರ್ಯಕ್ರಮಗಳ ಸಡಗರವೂ ಮೈದಳಿಯಲಿದೆ. ಫುಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಪುಸ್ತಕ ಮೇಳ, ಲಲಿತಕಲೆ-ಕರಕುಶಲ ಮೇಳ, ವಿವಿಧ ಕ್ರೀಡಾಕೂಟ, ಮೂರು ತಿಂಗಳ ವಸ್ತುಪ್ರದರ್ಶನ, ರಂಗೋಲಿ ಸ್ಪರ್ಧೆ, ಕವಿಗೋಷ್ಠಿ, ಮಹಿಳಾ ದಸರಾ, ಯೋಗ ದಸರಾ, ಮಕ್ಕಳ ದಸರಾ, ಪಾರಂಪರಿಕ ನಡಿಗೆ, ಪಾರಂಪರಿಕ ಸೈಕಲ್ ಸವಾರಿ, ರೈತ ದಸರಾ, ಕೃಷಿ ವಸ್ತು ಪ್ರದರ್ಶನ, ಮುದ್ದು ಪ್ರಾಣಿಗಳ ಪ್ರದರ್ಶನ, ಯೋಗ ಚಾರಣ... ಹೀಗೆ ವಿವಿಧ ಚಟುವಟಿಕೆ ಸುಗ್ಗಿಯ ಸೊಬಗು ನೋಡಲು ದೊರೆಯಲಿದೆ.

ಯುವ ದಸರಾದಲ್ಲಿ ಸಂಗೀತ ಅಲೆ:

ಯುವ ಜನರನ್ನು ಸಂಗೀತದ ಅಲೆಯಲ್ಲಿ ತೇಲಿಸುವ ‘ಯುವ ದಸರಾ’ ಅ.13ರಿಂದ 5 ದಿನಗಳ ಕಾಲ ನಡೆಯಲಿದ್ದು, ನೃತ್ಯ ನಿರ್ದೇಶಕ, ನಟ ಪ್ರಭುದೇವ ಉದ್ಘಾಟಿಸುವರು. ಪಾಶ್ಚಿಮಾತ್ಯ, ಸಿನಿಸಂಗೀತ-ನೃತ್ಯ ರಸಗವಳ ಇಲ್ಲಿ ಮೇಳೈಸಲಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಗಾಯಕರಾದ ಶಂಕರ್-ಎಹಸಾನ್-ಲಾಯ್, ಬಹುಭಾಷ ಗಾಯಕ ಸಿಡ್ ಶ್ರೀರಾಮ್, ಸ್ಯಾಂಡಲ್‌ವುಡ್ ನೈಟ್ಸ್, ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕ್ರೀಡಾ ಕಲರವ:

ದಸರಾ ಕ್ರೀಡಾಕೂಟದಲ್ಲಿ 28 ಕ್ರೀಡೆಗಳಲ್ಲಿ 4,500 ಕ್ರೀಡಾಪಟುಗಳು ಗೆಲುವಿಗಾಗಿ ಪೈಪೋಟಿ ನಡೆಸಲಿದ್ದು, ಕ್ರೀಡಾ ಕಲರವ ಕಳೆಗಟ್ಟಲಿದ್ದು, ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಪ್ರಣವಿ ಎಸ್.ಅರಸ್, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಭಾಗಿಯಾಗಿ ಸ್ಪರ್ಧಿಗಳಿಗೆ ಉತ್ಸಾಹ ತುಂಬಲಿದ್ದಾರೆ.

ಬೆಳಕು-ಬೆರಗು:

ಈ ಸಲವೂ ದಸರೆ ಅತ್ಯಾಕರ್ಷಕ ದೀಪಾಲಂಕಾರದಿಂದ ಜಗಮಗಿಸಲಿದೆ. ಹೊಸತನ, ವಿಭಿನ್ನ ಪ್ರಯೋಗಕ್ಕೆ ಮುಂದಾಗಿರುವ ಸೆಸ್ಕ್, ಈ ಬಾರಿ 123 ವೃತ್ತ, 146 ಕಿ.ಮೀ. ರಸ್ತೆ, ಪ್ರಮುಖ ಸ್ಥಳಗಳಲ್ಲಿ 80 ವಿಶಿಷ್ಟ ಆಕೃತಿಗಳು ಸಲ ಬೆಳಕಿನಲ್ಲಿ ಮಿಂಚಲಿವೆ. ವಿದ್ಯುತ್ ಕೊರತೆ ಸಂದರ್ಭದಲ್ಲೂ 21 ದಿನ ಕಾಲ ದೀಪಾಲಂಕಾರಕ್ಕೆ 3,106 ಕಿಲೋವಾಟ್ ವಿದ್ಯುತ್ ಬಳಸಲಾಗುತ್ತಿದೆ. ಬರೋಬ್ಬರಿ 9.5 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಡ್ರೋನ್ ಶೋ ಒಳಗೊಂಡಿದೆ.

ಡ್ರೋನ್ ಶೋ ಹೊಳಪು:

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆಸ್ಕ್ ವತಿಯಿಂದ ಡ್ರೋನ್ ಶೋ ಏರ್ಪಡಿಸಲಾಗಿದ್ದು, 3500 ಡ್ರೋನ್ ಬಳಸಿ ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರಣವನ್ನು ಆಗಸದಲ್ಲಿ ಮೂಡಿಸಲಾಗುತ್ತದೆ. ಇದರೊಂದಿಗೆ ಗಿನ್ನಿಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಅ.17, 18, 20, 21ರಂದು ನಡೆಯುವ ಇದರಲ್ಲಿ ಚಾಮುಂಡಿಬೆಟ್ಟದ ನಂದಿ, ಹಾರುವ ಚಿಟ್ಟೆ, ನವಿಲು, ವಿಷ್ಣು ಚಕ್ರ, ಹಾರುತ್ತಿರುವ ಪಾರಿವಾಳ, ಹಿಮ ಕರಡಿ ಸೇರಿದಂತೆ ಇನ್ನಿತರ ಆಕೃತಿಗಳು ನಭದಲ್ಲಿ ಮಿಣುಗಲಿವೆ.

ಜಂಬೂ ಸವಾರಿ ಮೆರುಗು:

ಅ.21ರಂದು ನಡೆಯುವ ಜನಾಕರ್ಷಣೆ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಭೂ, ವಾಯು, ನೌಕಾದಳದ ಮೂರು ತಂಡಗಳು, ಸಿನಿ ಕಲಾವಿದರು, ಹೊರರಾಜ್ಯ ಸ್ತಬ್ಧಚಿತ್ರಗಳು ಪ್ರಥಮ ಬಾರಿಗೆ ಭಾಗಿಯಾಗುತ್ತಿರುವುದು ಈ ಸಲದ ವಿಶೇಷ. ಬಳಿಕ ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದೊಂದಿಗೆ ದಸರೆಗೆ ತೆರೆ ಬೀಳಲಿದೆ.

ಖಾಸಗಿ ದರ್ಬಾರ್:

ಖಾಸಗಿ ದಸರಾಕ್ಕಾಗಿ ರಾಜವಂಶಸ್ಥರು ಸಹ ಸಿದ್ಧತೆ ಮಾಡಿಕೊಂಡಿದ್ದು, ಸಂಸದರೂ ಆಗಿರುವ ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸುವ ಮೂಲಕ ಆಳರಸರ ಗತಕಾಲದ ವೈಭವ ಮೆಲುಕು ಹಾಕಲಿದ್ದಾರೆ.

ಅಂಬಾರಿ ಆನೆ ಯಾರು...?

ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಯಾಗುತ್ತಿದ್ದರೂ ಅಂಬಾರಿ ಆನೆ ಅಂತಿಮವಾಗಿಲ್ಲ. ‘ಪ್ರಶಾಂತ್’ ಮತ್ತು ‘ಧನಂಜಯ್’ ಆನೆಗಳ ಪೈಕಿ ಒಂದು ಅಂಬಾರಿ ಹೊರಲಿದ್ದು, ಆದು ಯಾವುದು ಎಂಬುದು ಇನ್ನೂ ಕೌತುಕ. ನಿವೃತ್ತಿಯಾಗಿರುವ ಹಿಂದಿನ ಅಂಬಾರಿ ಆನೆ ಅಭಿಮನ್ಯು ಮತ್ತು ಇತರ 13 ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲು ತಾಲೀಮು ನಡೆಸಿವೆ.

ಭದ್ರತೆಗೆ 6 ಸಾವಿರ ಪೊಲೀಸರು:

ಸಹಸ್ರಾರು ಜನರು ಸೇರುವ ದಸರಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಪ್ರವಾಸಿಗರು ನೆಮ್ಮದಿಯಿಂದ ಮೈಸೂರಿಗೆ ದೌಡಾಯಿಸಬಹುದು. 6 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಿ, ಬರೋಬ್ಬರಿ 35 ಸಾವಿರ ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.

ಏರ್ ಶೋ ಮಿನುಗು:

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ ‘ವೈಮಾನಿಕ ಪ್ರದರ್ಶನ’ ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದು, ಭಾರತೀಯ ವಾಯು ದಳ ವತಿಯಿಂದ ಮೈನವಿರೇಳಿಸುವ ಕಸರತ್ತು ನಡೆಯಲಿದೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಸಾಹಸಮಯ ಪ್ರದರ್ಶನದ ವಿಶೇಷ ಆಕರ್ಷಣೆ. ಆದರೆ, ಸಾರಂಗ್ ಹೆಲಿಕಾಪ್ಟರ್ ಏರೋಬ್ಯಾಟಿಕ್ ತಂಡದ ಪ್ರದರ್ಶನಕ್ಕೆ ಈ ಸಲ ಅವಕಾಶ ಸಿಕ್ಕಿಲ್ಲ.

=======================

10ಎಂವೈಎಸ್1

*5

ದಸರಾ ಉದ್ಘಾಟನೆಗಾಗಿ ಚಾಮುಂಡಿಬೆಟ್ಟದಲ್ಲಿ ಸಜ್ಜಾಗುತ್ತಿರುವ ಬೆಳ್ಳಿರಥ.

*10

*16

ಮೈಸೂರು ಅರಮನೆಯಲ್ಲಿ ಮಾಡಲಾಗುತ್ತಿರುವ ಬೆಳಕಿನ ಅಲಂಕಾರ.

*27

======

* ಸಂಜೆ ಹೊತ್ತಿಗೆ ದೀಪಾಲಂಕಾರದ ಇನ್ನಷ್ಟು ಫೋಟೋಗಳು ಬರಲಿವೆ

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net