

ಪಿರಿಯಾಪಟ್ಟಣ: ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಇದುವರೆಗೂ ಸಂಪೂರ್ಣಗೊಳಿಸದಿರುವ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಮುಖಂಡ ಹಾಗೂ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ನೇತೃತ್ವದಲ್ಲಿ ಬೆಟ್ಟದಪುರದಿಂದ ಆರಂಭಿಸಿದ್ದ ಪಾದಯಾತ್ರೆ ಪಟ್ಟಣದಲ್ಲಿ ಅಂತ್ಯವಾಯಿತು.
ತಾಲೂಕಿನ ಬೆಟ್ಟದಪುರ ಗ್ರಾಮದಿಂದ ಪಿರಿಯಾಪಟ್ಟಣದವರೆಗೆ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಗೆ ಸಾಹಸ್ರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಹೆಜ್ಜೆ ಹಾಕಿದರು. ಸುಡುಬಿಸಿಲಿನ ನಡುವೆಯೂ ಬೆಟ್ಟದಪುರದಿಂದ ಪಿರಿಯಾಪಟ್ಟಣದವರೆಗೆ ಸುಮಾರು 16 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರಿಗೆ ಗ್ರಾಮಗಳ ಜನರು ಸ್ವಾಗತ ಕೋರುತ್ತಾ ಜತೆ ಹೆಜ್ಜೆ ಹಾಕಿದರು.
ಸಂಜೆ 4.30ರ ವೇಳೆಗೆ ಪಾದಯಾತ್ರೆ ಪಿರಿಯಾಪಟ್ಟಣದ ಬಸವೇಶ್ವರ ವೃತ್ತ ತಲುಪಿತು.
ಈ ಸಂದರ್ಭದಲ್ಲಿ ಪಿ.ಎಂ.ಪ್ರಸನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆ ಇಲ್ಲದಾಗಿದೆ ಎಂದು ಆರೋಪಿಸಿದರು.
ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು 9 ವರ್ಷಗಳ ಹಿಂದೆಯೇ ಆರಂಭಗೊಂಡಿದೆ. ಆದರೆ ಶಾಸಕ ಕೆ.ವೆಂಕಟೇಶ್ ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿದೆ. ಸರ್ಕಾರದ ಹಣ ಪೋಲಾಗಿದೆ ಎಂದು ಟೀಕಿಸಿದರು.
ಈ ಕಾಮಗಾರಿ ವ್ಯವಸ್ಥಿತವಾಗಿ ಸಂಪೂರ್ಣವಾಗಿ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಗುತ್ತಿಗೆದಾರನಿಗೆ ಬಿಲ್ ಮಾಡಿಸಿಕೊಡುವ ಉದ್ದೇಶದಿಂದ ಶಾಸಕ ಕೆ.ವೆಂಕಟೇಶ್ ಯೋಜನೆಯನ್ನು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಿದ್ದಾರೆ ಎಂದು ದೂರಿದರು.
ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಬೇರೆ ಗುತ್ತಿಗೆದಾರದಿಂದ ಈ ಕಾಮಗಾರಿ ಸಂಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬರ ಪರಿಹಾರದ ರೂಪದಲ್ಲಿ ರೈತರಿಗೆ ಕೇವಲ 2,500 ರೂ. ನೀಡಲು ಮುಂದಾಗಿರುವುದು ನಾಚಿಕೆಗೇಡಿನ ವಿಷಯ. ರೈತರಿಗೆ ಕನಿಷ್ಠ 50 ಸಾವಿರ ರೂ.ಗಳನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಶಾಸಕರು ನಿದ್ದೆಯಿಂದ ಎದ್ದು ಬಂದು ರೈತರ ಕಷ್ಟ ನೋಡಬೇಕು. ಒಂದು ದೂರು ತೆಗೆದುಕೊಳ್ಳಲು ಮುಖ್ಯಮಂತ್ರಿಗಳೇ ಇಲ್ಲಿಗೆ ಬರಬೇಕೆ? ರೈತರು ದೂರು ಕೊಡಲು ಬಂದರೆ ನಡೆಯಿರಿ ನಡೆಯಿರಿ ಎನ್ನುವ ಶಾಸಕರೇ ನಿಮಗೂ ಮುಂದಿನ ಚುನಾವಣೆಯಲ್ಲಿ ಜನರು ಇದೇ ಮಾತು ಹೇಳುತ್ತಾರೆ ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು, ಶಿರಸ್ತೇದಾರ್ ಶಕೀಲಾ ಬಾನು ಅವರ ಮೂಲಕ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮುಖಂಡರಾದ ಎಸ್.ರಾಮು, ಕೆ.ಸುರೇಶ್, ಸಿ.ಎನ್.ರವಿ, ಕೆ.ಕುಮಾರ್, ರಘುನಾಥ್, ರಾಜೇಗೌಡ, ಪ್ರೀತಿ ಅರಸ್, ನವೀನ್, ವಿನೋದ್, ಪ್ರಕಾಶ್ ಸಿಂಗ್, ವಿನೋದ್ ಮತ್ತಿತರರು ಹಾಜರಿದ್ದರು.
ವಿರೋಧದ ನಡುವೆಯೂ ಜನಸಾಗರ: ಪಿ.ಎಂ.ಪ್ರಸನ್ನ ಹಮ್ಮಿಕೊಂಡಿರುವ ಪಾದಯಾತ್ರೆ ಜೆಡಿಎಸ್ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಆದ್ದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಈ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಮಾಜಿ ಶಾಸಕ ಕೆ.ಮಹದೇವ್ ತಾಲೂಕು ಜೆಡಿಎಸ್ ಅಧ್ಯಕ್ಷರ ಮೂಲಕ ಹೇಳಿಕೆ ಕೊಡಿಸಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.